ಏರ್‌ಪೋರ್ಟ್ ಉದ್ಘಾಟನೆಗೂ ಮುನ್ನ ಪರಿಹಾರ ಒದಗಿಸಿ: ತೀ.ನ.ಶ್ರೀನಿವಾಸ್ ಎಚ್ಚರಿಕೆ

17 smg T.N. Srinivas
Published on

ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಮಂಗಳವಾರ ಸಂಜೆಯೊಳಗೆ ಸೂಕ್ತ ಪರಿಹಾರ ನೀಡದಿದ್ದರೆ ಸೋಗಾನೆ ಭೂಹಕ್ಕು ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ವಿಮಾನ ನಿಲ್ದಾಣಕ್ಕಾಗಿ ಭೂಮಿ ಕೊಟ್ಟವರನ್ನು ಸರ್ಕಾರ ನಿರ್ಲಕ್ಷಿಸಿದೆ. ಹಕ್ಕುಪತ್ರ ಮತ್ತು ನಿವೇಶನ ನೀಡುತ್ತೇವೆ, ಹುಬ್ಬಳ್ಳಿ ಮಾದರಿ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದರು. ಆದರೆ ಕೊಟ್ಟ ಮಾತಿಗೆ ತಪ್ಪಿದ್ದು ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಜಮೀನು ಕಳೆದುಕೊಂಡವರ ಅಲೆದಾಟ ಇನ್ನೂ ತಪ್ಪಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ರನ್‌ವೇ ಹೆಚ್ಚಿಸಲು ರೈತರು ಮತ್ತಷ್ಟು ಭೂಮಿ ಕಳೆದುಕೊಂಡರು. ಸರ್ಕಾರ ಪರಿಹಾರ ನೀಡಲು 10 ಕೋಟಿ ರೂ. ಬಿಡುಗಡೆ ಮಾಡಿದ್ದು ಈ ಹಣ ಡಿಸಿ ಖಾತೆಯಲ್ಲಿದೆ. ಆದರೆ ಅಧಿಕಾರಿಗಳು ಅದನ್ನು ನೀಡದೆ ಈ ಭೂಮಿ ನಿಮ್ಮದಲ್ಲ, ಸರ್ಕಾರದ್ದು ಎಂದು ಮತ್ತೆ ರೈತರ ವಿರುದ್ಧವೇ ಕೇಸ್ ಹಾಕಿದ್ದಾರೆ. 400 ಜನರಿಗೆ ನಿವೇಶನ ನೀಡುವುದಾಗಿ ಭರವಸೆ ಕೊಟ್ಟಿದ್ದರು. ವಿಮಾನ ನಿಲ್ದಾಣ ಉದ್ಘಾಟನೆಗೆ ಮೊದಲು ನಿವೇಶನದ ಹಕ್ಕುಪತ್ರ ನೀಡುತ್ತೇವೆ ಎಂದು ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ದೂರಿದರು.

ಉದ್ಘಾಟನೆಗೆ ಮೊದಲು ಸಂತ್ರಸ್ತರ ಸಮಸ್ಯೆ ಬಗೆಹರಿಸಬೇಕು. ರಾಜ್ಯ ಸರ್ಕಾರ ಇದರ ಹೊಣೆ ಹೊರಬೇಕು. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ ಸಂತ್ರಸ್ತರು ಮತ್ತು ರೈತರು ವಿಮಾನ ನಿಲ್ದಾಣದ ಬಳಿಯೇ ಮುಷ್ಕರ ಮಾಡುವುದಾಗಿ ಎಚ್ಚರಿಸಿದರು. ಪ್ರಮುಖರಾದ ಎಂ.ಬಿ.ಕೃಷ್ಣಪ್ಪ, ಶಿವಾನಂದ್, ಶಿವಕುಮಾರ್, ಗಣೇಶ್, ಚನ್ನಕೇಶವ, ರವಿಕುಮಾರ್, ರಾಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net