

ರಾಣೆಬೆನ್ನೂರ: ಐರಣಿ ಹೊಳೆಮಠವು ಐತಿಹಾಸಿಕ ಹಿನ್ನೆಲೆಯುಳ್ಳದ್ದಾಗಿದ್ದು ಮಠದ ಶಕ್ತಿ ಅದ್ಭುತವಾಗಿದೆ. ಸೋತಿದ್ದೇನೆಂದು ಮನೆಯಲ್ಲಿ ಕುಳಿತುಕೊಳ್ಳದೆ ಸಾರ್ವಜನಿಕರ ಸೇವೆ ಜತೆಗೆ ಮಠದ ಅಭಿವೃದ್ಧಿ ಕಾರ್ಯಗಳಿಗೆ ಸದಾ ಶ್ರಮಿಸುತ್ತೇನೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ತಾಲೂಕಿನ ಐರಣಿ ಹೊಳೆಮಠದಲ್ಲಿ ಶ್ರೀ ಗುರು ಮುಪ್ಪಿನಾರ್ಯ ಮಹಾತ್ಮಾಜಿಯವರ ಪುಣ್ಯಾರಾಧನೆ ಹಾಗೂ ಶ್ರೀ ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿಯವರ ಅಂಬಾರಿ ಉತ್ಸವ, ತುಲಾಭಾರ, ರಥೋತ್ಸವ, ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದ ಜನತೆ ಮೊನ್ನೆ ಮಾಡಿದ ತಪ್ಪನ್ನು ಪುನರಾವರ್ತಿಸಬೇಡಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಸದೃಢವಾಗಿ ಬೆಳೆಯುತ್ತಿದೆ. ಆದ್ದರಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಬಾರಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಜನರು ಮುಂದಾಗಬೇಕು ಎಂದರು.
ಬಿಜೆಪಿ ಮುಖಂಡ ಕೆ.ಇ. ಕಾಂತೇಶ ಮಾತನಾಡಿ, ನಮ್ಮ ದೇಶದ ಮೇಲೆ ಹಲವಾರು ಬಾರಿ ವಿದೇಶಗಳಿಂದ ಆಕ್ರಮಣಗಳು ನಡೆದರೂ ಇಂದಿಗೂ ಭಾರತ ಸುರಕ್ಷವಾಗಿರಲು ಮಠ, ಮಂದಿರಗಳು ಹಾಗೂ ಸಾಧು ಸಂತರ ಶಕ್ತಿ ಕಾರಣವಾಗಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ನಮ್ಮ ಮಠಗಳು ಧಾರ್ಮಿಕ ಚಿಂತನೆಯ ಜತೆಯಲ್ಲಿ ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಠದ ಉತ್ತರಾಧಿಕಾರಿ ಸಿದ್ಧಾರೂಢ, ಚಿಕ್ಕೋಡಿ ಜೋಡಕುರುಳಿ ಸಿದ್ಧಾರೂಢ ಮಠದ ಚಿದ್ಘನಾನಂದ ಭಾರತಿ ಸ್ವಾಮೀಜಿ, ಹದಡಿ ಚಂದ್ರಗಿರಿಮಠ ಮುರಳಿಧರ ಸ್ವಾಮೀಜಿ, ಹೋತನಹಳ್ಳಿ ಸಿದ್ಧಾರೂಢ ಮಠ ಶಂಕರಾನಂದ ಸ್ವಾಮೀಜಿ, ದಾವಣಗೆರೆ ಜಡೆ ಸಿದ್ದೇಶ್ವರ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಪ್ರಮುಖರಾದ ಬಾಬಣ್ಣ ಶೆಟ್ಟರ, ಪ್ರಕಾಶ ಪೂಜಾರ, ಸಿದ್ಧು ಚಿಕ್ಕಬಿದರಿ, ರೇವಣಸಿದ್ದಪ್ಪ ಜೆ.ಆರ್ ಮತ್ತಿತರರು ಪಾಲ್ಗೊಂಡಿದ್ದರು.