

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ಉಸಿರುಗಟ್ಟಿಸುವ ವಾತಾವರಣ ಮತ್ತೊಂದು ಆತಂಕವನ್ನು ತಂದಿಟ್ಟಿದೆ. ದೆಹಲಿಯಲ್ಲಿ ಹೆಚ್ಚಾಗಿರುವ ವಾಯುಮಾಲಿನ್ಯ ಕೋವಿಡ್-19 ಸೋಂಕಿನ ಪ್ರಕರಣ, ಸೋಂಕಿತರ ರೋಗಲಕ್ಷಣಗಳನ್ನು ಹೆಚ್ಚಾಗಿಸುವ ಸಾಧ್ಯತೆ ಇದೆ ಎಂಬ ಭಯ ಇದೀಗ ಕಾಡಲಾರಂಭಿಸಿದೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸನ್ನ ನಿರ್ದೇಶಕ ಡಾ. ರಣ್ದೀಪ್ ಗುಲೇರಿಯಾ ಅವರು ಇಂಥದ್ದೊಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ವಾಯುಮಾಲಿನ್ಯ ಶ್ವಾಸಕೋಶದ ಆರೋಗ್ಯದ ಮೇಲೆ ಅದರಲ್ಲೂ ಶ್ವಾಸಕೋಶದ ತೊಂದರೆ, ಅಸ್ತಮಾ ಹೊಂದಿರುವವರನ್ನು ಬಹುವಾಗಿ ಕಾಡಲಿದೆ. ಅಲ್ಲದೆ ಕೋವಿಡ್ ಕೂಡ ಶ್ವಾಸಕೋಶವನ್ನು ಬಾಧಿಸುವ ರೋಗವಾದ್ದರಿಂದ ಕೋವಿಡ್ ಸೋಂಕಿತರ ಸಾವಿನ ಸಾಧ್ಯತೆಯನ್ನು ಈ ಮಾಲಿನ್ಯ ಹೆಚ್ಚಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಮಾಲಿನ್ಯಯುಕ್ತ ಗಾಳಿಯಲ್ಲಿ ಕೋವಿಡ್-19 ವೈರಸ್ ಹೆಚ್ಚು ಕಾಲ ಇರಬಲ್ಲದು, ಗಾಳಿ ಮೂಲಕ ಹೆಚ್ಚು ಹರಡಬಲ್ಲದು. ಅಲ್ಲದೆ ಈ ಮಾಲಿನ್ಯ ಶ್ವಾಸಕೋಶದ ಊತ ಹಾಗೂ ಉರಿಯನ್ನು ಹೆಚ್ಚಿಸುತ್ತದೆ. ಇದು ಕೂಡ ಕೋವಿಡ್ ಸೋಂಕಿನ ಲಕ್ಷಣಗಳನ್ನು ಗಂಭೀರವಾಗಿಸಬಲ್ಲದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)