

ನವದೆಹಲಿ: ಲಾಕ್ಡೌನ್ನಿಂದ ಭಾರತದಲ್ಲಿ ಸಿಲುಕಿರುವ ವಿದೇಶಿಗರನ್ನು ಆಯಾ ದೇಶಗಳಿಗೆ ಏರ್ ಇಂಡಿಯಾ ವಿಶೇಷ ವಿಮಾನಗಳ ಮೂಲಕ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. ಅದಕ್ಕೆ ಜಗತ್ತಿನ ಹಲವು ದೇಶಗಳು ಮೆಚ್ಚುಗೆಯನ್ನೂ ವ್ಯಕ್ತಪಡಿಸಿವೆ.
ಈಗ ಇನ್ನೊಂದು ಮಹತ್ವದ ಕಾರ್ಯವನ್ನು ಕೇಂದ್ರ ಸರ್ಕಾರ ಏರ್ ಇಂಡಿಯಾ ವಿಮಾನಗಳ ಮೂಲಕ ಮಾಡುತ್ತಿದೆ.
ಇಲ್ಲಿನ ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಅವರು ಬೆಳೆದ ಹಣ್ಣು, ತರಕಾರಿಗಳನ್ನು ಎರಡು ವಿಶೇಷ ವಿಮಾನಗಳ ಮೂಲಕ ಲಂಡನ್ ಹಾಗೂ ಜರ್ಮನಿಯ ಫ್ರಾಂಕ್ಫರ್ಟ್ಗಳಿಗೆ ಕಳಿಸಿಕೊಡಲಾಗುತ್ತಿದೆ.
ಲಾಕ್ಡೌನ್ನಿಂದ ಕೃಷಿ ಉತ್ಪನ್ನಗಳ ಮಾರಾಟಕ್ಕೂ ಕಷ್ಟವಾಗಿದೆ. ರೈತರು ತಮ್ಮ ಬೆಳೆಯನ್ನು ಮಾರಲಾಗದೆ ಕಂಗಾಲಾಗುತ್ತಿದ್ದಾರೆ. ಹಣ್ಣು, ತರಕಾರಿಗಳನ್ನು ರಸ್ತೆಯಲ್ಲಿ ಎಸೆಯುತ್ತಿರುವ ಘಟನೆಗಳೂ ನಡೆಯುತ್ತಿದೆ. ಹೀಗಿರುವಾಗ ರೈತರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಕೃಷಿ ಉದಾನ್ ಯೋಜನೆಯಡಿ ಎರಡು ಏರ್ ಇಂಡಿಯಾ ವಿಮಾನಗಳು ಹಣ್ಣು, ತರಕಾರಿಗಳನ್ನು ಸಾಗಣೆ ಮಾಡಲಿವೆ.
ಪ್ರಸಕ್ತ ಋತುವಿನ ಪ್ರಮುಖ ಹಣ್ಣು ಮತ್ತು ತರಕಾರಿಗಳನ್ನು ಹೊತ್ತ ಒಂದು ವಿಮಾನ ಏಪ್ರಿಲ್ 13ರಂದು ಲಂಡನ್ಗೆ ತೆರಳಲಿದ್ದು, ಇನ್ನೊಂದು ವಿಮಾನ ಏಪ್ರಿಲ್ 15ರಂದು ಫ್ರಾಂಕ್ಫರ್ಟ್ಗೆ ಹೋಗಲಿದೆ. ಇವೆರಡೂ ವಿಮಾನಗಳು ವಾಪಸ್ ಬರುವಾಗ ಅಲ್ಲಿಂದ ಕೆಲವು ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತು ತರಲಿವೆ ಎಂದು ಸರ್ಕಾರದ ಉನ್ನತ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ರೈತರ ಬೆಳೆಯನ್ನು ವಿದೇಶಗಳಿಗೆ ಸಾಗಿಸುವ ಮೂಲಕ ಅವರಿಗೆ ನೆರವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೃಷಿ ಉದಾನ್ ಯೋಜನೆಯನ್ನು ಜಾರಿಗೊಳಿಸಿದೆ. (ಏಜೆನ್ಸೀಸ್)