

Air India Crash: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತಗಳಲ್ಲಿ ಒಂದಾದ ಅಹಮದಾಬಾದ್ ಏರ್ ಇಂಡಿಯಾ ಅಪಘಾತ ಇನ್ನೂ ದೇಶದ ಜನರಲ್ಲಿ ಮಾಸಿಲ್ಲ. ಒಟ್ಟು 270 ಜನರನ್ನು ಬಲಿಪಡೆದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ದುರಂತಕ್ಕೆ ಪ್ರಾಥಮಿಕ ತನಿಖಾ ವರದಿ ಬಿಟ್ಟರೆ ಅಂತಿಮ ಹಾಗೂ ವಿಸ್ತೃತ ವರದಿ ಇನ್ನೂ ಲಭ್ಯವಾಗಿಲ್ಲ. ಅದಾಗಲೇ ದುರಂತಕ್ಕೆ ಪೈಲಟ್ಗಳೇ ಕಾರಣ, ಇಂಧನ ಸ್ವಿಚ್ಗಳಲ್ಲಿ ಉಂಟಾದ ತಾಂತ್ರಿಕ ದೋಷವೇ ಕಾರಣ ಎಂಬ ಸಾಲು ಸಾಲು ಆರೋಪಗಳು ಕೇಳಿಬಂದಿವೆ.
ಈ ಕುರಿತಂತೆ ಒಂದಷ್ಟು ವರದಿಗಳು ಕೂಡ ಪ್ರಕಟವಾಗಿದ್ದು, ವಿಮಾನಯಾನ ಸಂಸ್ಥೆ ಸಲ್ಲಿಸಿರುವ ಪ್ರಾಥಮಿಕ ವರದಿ ಸದ್ಯ ಭಾರೀ ಗೊಂದಲಕ್ಕೆ ಕಾರಣವಾಗಿದೆ. ಟೀಕೆ, ಆರೋಪ, ಊಹಾಪೋಹಗಳ ನಡುವೆ ಇದೀಗ ಏರ್ ಇಂಡಿಯಾ ಸಂಸ್ಥೆಯೇ ಸ್ಪಷ್ಟನೆಗೆ ಇಳಿದಿದ್ದು, ತಪಾಸಣೆಯಲ್ಲಿ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಇಂಧನ ಸ್ವಿಚ್ಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿಲ್ಲ. ಏರ್ ಇಂಡಿಯಾ ತನ್ನೆಲ್ಲ ಬೋಯಿಂಗ್ 787 ಮತ್ತು 737 ವಿಮಾನಗಳಲ್ಲಿನ ಇಂಧನ ನಿಯಂತ್ರಣ ಸ್ವಿಚ್ಗಳ (FCS) ಲಾಕಿಂಗ್ ಕಾರ್ಯವಿಧಾನದ ಬಗ್ಗೆ ಮುನ್ನೆಚ್ಚರಿಕೆ ಪರಿಶೀಲನೆಗಳನ್ನು ಪೂರ್ಣಗೊಳಿಸಿದೆ.
ತಪಾಸಣೆಯ ಸಮಯದಲ್ಲಿ, ಲಾಕಿಂಗ್ ಕಾರ್ಯವಿಧಾನದಲ್ಲಿ ಯಾವುದೇ ಸಮಸ್ಯೆಗಳು ನಮಗೆ ಕಂಡುಬಂದಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ. ಬೋಯಿಂಗ್ 737 ವಿಮಾನಗಳು ಏರ್ ಇಂಡಿಯಾದ ಅಂಗಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೀಟ್‌ನ ಭಾಗವಾಗಿದೆ. ಜು.12ರಂದು ಸಂಸ್ಥೆ ಸ್ವಯಂಪ್ರೇರಿತ ತಪಾಸಣೆಗಳನ್ನು ಕೈಗೊಂಡಿತು ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿಗದಿಪಡಿಸಿದ ನಿಗದಿತ ಸಮಯದ ಮಿತಿಯೊಳಗೆ ಅವುಗಳನ್ನು ಪೂರ್ಣಗೊಳಿಸಿತು ಎಂದು ಏರ್ ಇಂಡಿಯಾ ಹೇಳಿದೆ.
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿತು. ಗುರುವಾರ (ಜೂನ್ 12) ಮಧ್ಯಾಹ್ನ ಟೇಕಾಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸುಟ್ಟು ಬೂದಿಯಾದರು.
ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪ್ರಾಥಮಿಕ ತನಿಖೆ ಮಾತ್ರವಲ್ಲದೇ ಪೂರ್ಣ ವರದಿ ಬಳಿಕ ನಿಖರ ಕಾರಣ ತಿಳಿಯಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದೇ ಆದರೂ ಈ ಪ್ರಮಾಣದ ಭೀಕರತೆ ಇದೇ ಮೊದಲು ಎಂಬುದು ಆಶ್ಚರ್ಯಕರ.