

ಬೆಂಗಳೂರು: ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಏರ್ ಇಂಡಿಯಾ ವಿಮಾನದೊಳಗೆ ನೀಡಲಾದ ಊಟದಲ್ಲಿ ಲೋಹದ ಬ್ಲೇಡ್ ಇರುವುದನ್ನು ಪತ್ತೆಹಚ್ಚಿದ್ದು, ಅದರ ಫೋಟೋ ತೆಗೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ದೃಶ್ಯ ವೈರಲ್ ಆಗುತ್ತಿದ್ದಂತೆ ಏರ್ಲೈನ್ಸ್ ಸಿಬ್ಬಂದಿ ವಿರುದ್ಧ ಇದೀಗ ನೆಟ್ಟಿಗರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.
ಮಾಥುರೆಸ್ ಪಾಲ್ ಎಂಬ ಪತ್ರಕರ್ತರೊಬ್ಬರು ಕಳೆದ ವಾರ ಏರ್ ಇಂಡಿಯಾ AI 175 ವಿಮಾನದಲ್ಲಿ ತಾವು ಅನುಭವಿಸಿದ ಪರಿಸ್ಥಿತಿಯನ್ನು ಇತರರಿಗೂ ತಿಳಿಸುವ ಸಲುವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ವಿವರ ಮಾಹಿತಿ ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ, ಹುರಿದ ಸಿಹಿ ಗೆಣಸು ಮತ್ತು ಅಂಜೂರದ ಚಾಟ್ನ ಆನಂದಿಸುವಾಗ ಅದರೊಳಗೆ ಲೋಹದ ಬ್ಲೇಡ್ ತುಂಡು ಇರುವುದು ಗೊತ್ತಾಯಿತು ಎಂದರು.
"ಅದೃಷ್ಟವಶಾತ್, ಯಾವುದೇ ಹಾನಿ ಸಂಭವಿಸಿಲ್ಲ. ಖಂಡಿತವಾಗಿ, ಆಪಾದನೆಯು ಏರ್ ಇಂಡಿಯಾದ ಅಡುಗೆ ಸೇವೆಯ ಮೇಲಿದೆ. ಇದೇ ಊಟವನ್ನು ಒಂದು ಮಗು ತಿಂದಿದ್ದರೆ ಏನಾಗಬಹುದು ಎಂಬುದನ್ನು ಒಮ್ಮೆ ಯೋಚಿಸಬೇಕಾಗುತ್ತದೆ. ಮೊದಲ ಫೋಟೋದಲ್ಲಿ ನಾನು ಉಗುಳಿದ ಲೋಹದ ತುಂಡನ್ನು ತೋರಿಸುತ್ತದೆ ಮತ್ತು ಎರಡನೇ ಚಿತ್ರದಲ್ಲಿ ಬ್ಲೇಡ್ ಸಿಗುವ ಮೊದಲು ಊಟ ಹೇಗಿತ್ತು ಎಂಬುದನ್ನು ತೋರಿಸುತ್ತದೆ" ಎಂದು ಹೇಳಿದರು.
ಘಟನೆಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, ಪ್ರಯಾಣಿಕ ಪಾಲ್ರನ್ನು ಸಂಪರ್ಕಿಸಿ, ತಪ್ಪಿಗಾಗಿ ಕ್ಷಮಿಸಿ, ಮುಂದಿನ ಒಂದು ವರ್ಷದವರೆಗೆ ಮಾನ್ಯವಾದ ರಿಡೀಮ್ ಮಾಡಿಕೊಳ್ಳಬಹುದಾದ ಏಕಮುಖ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಅನ್ನು ನೀಡಿತು. ಇದನ್ನು ಖಂಡಿಸಿದ ಪಾಲ್, ಇದು ಲಂಚ ಬಿಟ್ಟರೆ ಬೇರೇನೂ ಅಲ್ಲ ಎಂದು ಏರ್ಲೈನ್ಸ್ ವಿರುದ್ಧ ಕಿಡಿಕಾರಿದ್ದಾರೆ.
ನಮ್ಮ ವಿಮಾನವೊಂದರಲ್ಲಿ ಪ್ರಯಾಣಿಕರ ಊಟದಲ್ಲಿ ಬ್ಲೇಡ್ ತುಂಡೊಂದು ಕಂಡುಬಂದಿದೆ ಎಂದು ದೃಢಪಡಿಸಿದ ಏರ್ ಇಂಡಿಯಾ, ತನಿಖೆಯ ನಂತರ, ಇದು ನಮ್ಮ ಅಡುಗೆ ಕೋಣೆಯ ಸೌಲಭ್ಯಗಳಲ್ಲಿ ಬಳಸಲಾದ ತರಕಾರಿ ಸಂಸ್ಕರಣಾ ಯಂತ್ರದಿಂದ ಬಂದಿದೆ ಎಂದು ಗುರುತಿಸಲಾಗಿದೆ. ಈ ಕುರಿತು ಪ್ರಯಾಣಿಕರಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ಏರ್ ಇಂಡಿಯಾದ ರಾಜೇಶ್ ಡೋಗ್ರಾ ಹೇಳಿದ್ದಾರೆ,(ಏಜೆನ್ಸೀಸ್).