ದೆಹಲಿಗೆ ಬಂದಿಳಿಯಿತು ಮತ್ತೊಂದು ಏರ್​ ಇಂಡಿಯಾ ಒನ್​

Air India One B-777 600 400
Published on

ನವದೆಹಲಿ: ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಗಳ ಪ್ರಯಾಣಕ್ಕೆ ಮೀಸಲಾದ ಎರಡನೇ ಏರ್​ ಇಂಡಿಯಾ ಒನ್​ ವಿಮಾನ ಶನಿವಾರ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಮೊದಲನೇ ವಿಮಾನ ಈ ತಿಂಗಳ ಆರಂಭದಲ್ಲೇ ದೆಹಲಿಗೆ ಆಗಮಿಸಿತ್ತು.

ಬೋಯಿಂಗ್​ ಬಿ -747 ವಿಮಾನದ ಬದಲಿಗೆ ಇನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮುಂತಾದ ಗಣ್ಯರು ಬಿ-777 ವಿವಿಐಪಿ ಮಾದರಿಯ ವಿಮಾನವನ್ನು ಬಳಸಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಏರ್​ ಇಂಡಿಯಾದ ಹಿರಿಯ ಅಧಿಕಾರಿಗಳು ಅಗತ್ಯಗಳನ್ನು ಪೂರೈಸುವುದಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.

ಅತಿಗಣ್ಯರ ಓಡಾಟಕ್ಕಾಗಿ ಖರೀದಿಸಿರುವ ಎರಡು ಬಿ777 ವಿಮಾನದಲ್ಲಿ ಲಾರ್ಜ್​ ಏರ್​ಕ್ರಾಫ್ಟ್​ ಇನ್​ಫ್ರಾರೆಡ್​ ಕೌಂಟರ್​ಮೆಷರ್ಸ್​ (ಎಲ್​ಎಐಆರ್​ಸಿಎಂ) ಎಂಬ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲ, ಸ್ವಯಂರಕ್ಷಣ ಸೂಟ್​ಗಳನ್ನೂ ಇದು ಒಳಗೊಂಡಿದೆ. ಎರಡು ವಿಮಾನಗಳಲ್ಲಿ ಅಳವಡಿಸಲಾಗುತ್ತಿರುವ ಎಲ್​ಎಐಆರ್​ಸಿಎಂ ವ್ಯವಸ್ಥೆಯನ್ನು 1,434.72 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೆರಿಕದಿಂದ ಖರೀದಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net