ಪಾಕಿಸ್ತಾನ ವಾಯುಪ್ರದೇಶ ನಿರ್ಬಂಧ; ಏರ್ ಇಂಡಿಯಾಗೆ ಸಾವಿರಾರು ಕೋಟಿ ರೂ. ನಷ್ಟ! ಹೀಗಿದೆ ವರದಿ | Air India

ವಿಜಯವಾಣಿ - 2025-05-02T102038.132
Published on

Air India: ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ಭೀಕರ ಗುಂಡಿನ ದಾಳಿಗೆ 26 ಅಮಾಯಕರು ಜೀವ ಬಿಟ್ಟಿದ್ದಾರೆ. ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ಪಾಕ್​ ವಿರುದ್ಧ ಪ್ರತೀಕಾರಕ್ಕಾಗಿ ಪಣತೊಟ್ಟಿದೆ. ಈ ಹಿನ್ನೆಲೆ ಎರಡು ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇದೆಲ್ಲದರ ಮಧ್ಯೆ ಪಾಕಿಸ್ತಾನ ಸರ್ಕಾರ ತೆಗೆದುಕೊಂಡ ನಿರ್ಧಾರವು ಇದೀಗ ಭಾರತದ ಪ್ರಮುಖ ವಾಯುಯಾನ ದೈತ್ಯ ಏರ್ ಇಂಡಿಯಾಗೆ ಸಾವಿರಾರು ಕೋಟಿ ರೂ. ನಷ್ಟ ಉಂಟುಮಾಡಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಪಾಕಿಸ್ತಾನವು ಭಾರತದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದ್ದು, ಪಾಕ್​ ವಾಯುಪ್ರದೇಶದ ಮೇಲೆ ಭಾರತೀಯ ವಿಮಾನಗಳ ಸಂಚಾರವನ್ನು ನಿಷೇಧಿಸುವುದಾಗಿ ಇತ್ತೀಚೆಗೆ ಘೋಷಿಸಿದೆ. ಈ ನಿರ್ಧಾರದಿಂದಾಗಿ ಏರ್ ಇಂಡಿಯಾ ಸುಮಾರು 600 ಮಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ವರದಿಗಳು ಬಹಿರಂಗಪಡಿಸಿವೆ.

ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಭಾರತೀಯ ವಿಮಾನಗಳ ಹಾರಾಟ ನಿಷೇಧವು, ವಿಮಾನಗಳ ತಿರುವು, ಪ್ರಯಾಣದ ದೂರ ಹೆಚ್ಚಳ ಮತ್ತು ಹೆಚ್ಚುವರಿ ಇಂಧನ ಬಳಕೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ, ವಿಮಾನಯಾನ ಸಂಸ್ಥೆಯು ಪ್ರತಿ ವರ್ಷ 591 ಮಿಲಿಯನ್ ಡಾಲರ್​ ನಷ್ಟ ಅನುಭವಿಸಲಿದೆ ಎಂದು ಅಂದಾಜಿಸಲಾಗಿದೆ. ಈ ನಷ್ಟವನ್ನು ಸರಿದೂಗಿಸಲು ಸರ್ಕಾರದಿಂದ ಸಬ್ಸಿಡಿ ಕೋರಿ ಏರ್ ಇಂಡಿಯಾ ಆಡಳಿತ ಮಂಡಳಿಯು ವಾಯುಯಾನ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ವಾಯುಪ್ರದೇಶ ನಿಷೇಧ ನಿರ್ಧಾರವು ಏರ್ ಇಂಡಿಯಾ ಮಾತ್ರವಲ್ಲದೆ ಟಾಟಾ ಗ್ರೂಪ್‌ನ ಇತರ ವಿಮಾನಯಾನ ಸೇವೆಗಳ ಮೇಲೂ ದೊಡ್ಡ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಉದಾಹರಣೆಗೆ, ಗುರುವಾರ ಇಂಡಿಗೋ ಸಂಸ್ಥೆಯ ನವದೆಹಲಿ-ಬಾಕು (ಅಜೆರ್ಬೈಜಾನ್) ವಿಮಾನವು ಐದು ಗಂಟೆ 43 ನಿಮಿಷಗಳ ಪ್ರಯಾಣ ಅವಧಿ ತೆಗೆದುಕೊಂಡಿತು. ಪಾಕಿಸ್ತಾನದ ವಾಯುಪ್ರದೇಶದಿಂದ ಬೇರೆಡೆಗೆ ತಿರುಗಿಸಿದ್ದರಿಂದ ಇದು 38 ನಿಮಿಷಗಳನ್ನು ಹೆಚ್ಚು ಸಮಯ ತೆಗೆದುಕೊಂಡಿತು. ಆ ಹೆಚ್ಚುವರಿ ಸಮಯವನ್ನು ಇಂಧನಕ್ಕಾಗಿ ವ್ಯಯಿಸಲಾಗುತ್ತಿದೆ. ಇದರಿಂದ ಪ್ರಯಾಣದ ಸಮಯದಲ್ಲಿ ವ್ಯತ್ಯಯ ಹಾಗೂ ಇತರ ಸೇವೆಗಳಲ್ಲಿಯೂ ಭಾರಿ ವೆಚ್ಚ ಎದುರಾಗುತ್ತಿದೆ ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಆದಾಗ್ಯೂ, ಇತರ ವಿಮಾನಯಾನ ಸಂಸ್ಥೆಗಳಿಗೆ ಹೋಲಿಸಿದರೆ, ಏರ್ ಇಂಡಿಯಾ ಜಾಗತಿಕವಾಗಿ ಹಲವಾರು ದೇಶಗಳಿಗೆ ತನ್ನ ಎಲ್ಲಾ ವಿಮಾನಗಳನ್ನು ಪಾಕಿಸ್ತಾನದ ವಾಯುಪ್ರದೇಶದಿಂದ ಕಾರ್ಯನಿರ್ವಹಿಸುತ್ತದೆ. ಪಾಕಿಸ್ತಾನದ ಇತ್ತೀಚಿನ ನಿರ್ಧಾರವು ಏರ್ ಇಂಡಿಯಾದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಪ್ರಾರಂಭಿಸಿವೆ. ಉದಾಹರಣೆಗೆ, ದೆಹಲಿ-ಮಧ್ಯಪ್ರಾಚ್ಯ ವಿಮಾನಗಳು ಈಗ ಕನಿಷ್ಠ ಒಂದು ಗಂಟೆ ಹೆಚ್ಚು ಹಾರಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಹೆಚ್ಚಿನ ಇಂಧನ ಅಗತ್ಯವಿದೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net