

ತರೀಕೆರೆ: ಎಲ್ಲವೂ ಕಾಂಕ್ರಿಟೀಕರಣ ಆಗುತ್ತಿರುವುದರಿಂದ ಗಾಳಿ, ನೆರಳಿಗೆ ಸಂಚಕಾರ ಎದುರಾಗಿದೆ. ಗಿಡ ಮರ ಹೆಚ್ಚು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವೀರೇಂದ್ರ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಸಮೀಪದ ಈದ್ಗಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿ ಅಕ್ಷಯ ಪಾತ್ರೆ ಇದ್ದಂತೆ. ನಾವು ಪರಿಸರಕ್ಕೆ ಒಳ್ಳೆಯದನ್ನು ನೀಡಿದರೆ ಅದು ನಮಗೆ ಹಿಂದಿರುಗಿ ಒಳಿತನ್ನೇ ಮಾಡುತ್ತದೆ. ನಾವು ನೆಡುತ್ತಿರುವ ಗಿಡಗಳು ಈದ್ಗಾ ಮೈದಾನದಲ್ಲಿ ವಿಶೇಷ ದಿನಗಳಲ್ಲಿ ನಡೆಯುವ ನಮಾಜ್ ವೇಳೆ ಬರುವ ಜನರಿಗೆ ನೆರಳು ನೀಡುತ್ತವೆ. ಅಷ್ಟೇ ಅಲ್ಲ, ಪಕ್ಷಿಗಳಿಗೆ ಆಹಾರ, ಆಶ್ರಯ ನೀಡುವಂತಾಗಲಿ ಎಂದು ಹಾರೈಸಿದರು.
ಡಿಆರ್‌ಎ್ಒ ಅಮೀನ್ ನದ್ಾ ಮಾತನಾಡಿ, ಪ್ರಾಣಿ ಪಕ್ಷಿ, ಜೀವ ಸಂಕುಲಗಳು ಗಿಡ ಮರಗಳಿಲ್ಲದೆ ಅಪಾಯದ ಅಂಚಿನಲ್ಲಿವೆ. ನಾವು ಪರಿಸರಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ, ಗಿಡ ಮರಗಳು ಮಾನವನ ಬದುಕಿನೊಂದಿಗೆ ಗಾಢ ಸಂಬಂಧ ಹೊಂದಿವೆ ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ದಾದಾಪೀರ್, ಮಾಜಿ ಸದಸ್ಯ ಟಿ.ಜಿ.ಸದಾನಂದ್, ಜಾಮಿಯಾ ಮಸೀದಿ ಅಧ್ಯಕ್ಷ ಅಮ್ಜದ್, ಭಾಷಾ, ಬಜಾರ್ ಮಸೀದಿ ಅಧ್ಯಕ್ಷ ಶಬ್ಬೀರ್ ಅಹಮದ್, ಸಾಮಾಜಿಕ ಕಾರ್ಯಕರ್ತರಾದ ಮಧುಸೂದನ್, ಆಯೂಬ್ ಶಫೀವುಲ್ಲಾ, ಪದ್ಮಾ ಇತರರಿದ್ದರು.