ಹೆದ್ದಾರಿಯಲ್ಲೇ ಇಳಿದ ವಾಯುಪಡೆ ವಿಮಾನ!; ಪಾಕ್​ ಗಡಿ ಸಮೀಪ ಯಶಸ್ವಿ ಪ್ರಯೋಗ

Flight
Published on

ಬಾಮೇರ್/ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಯುಪಡೆ ವಿಮಾನವನ್ನು ತುರ್ತಾಗಿ ಇಳಿಸುವ ಪ್ರಯೋಗ ಗುರುವಾರ ಯಶಸ್ವಿಯಾಗಿದೆ. ಪಾಕಿಸ್ತಾನದ ಗಡಿಯ ಬಾಮೇರ್​ನಲ್ಲಿ ಎನ್​ಎಚ್ 925ರ ಸತ್ತಾ-ಗಾಂಧವ್ ವಿಭಾಗದಲ್ಲಿ ಭಾರತೀಯ ವಾಯು ಪಡೆಯ ಹರ್ಕ್ಯುಲಸ್ ಸಿ-130ಜೆ ವಿಮಾನವನ್ನು ಇಳಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ವಿಮಾನದಲ್ಲಿದ್ದರು.

ಗಡಿಯಲ್ಲಿರುವ ಹೆದ್ದಾರಿಯಲ್ಲಿ ವಾಯುಪಡೆ ವಿಮಾನಗಳು ತುರ್ತಾಗಿ ಇಳಿಯಲು ವ್ಯವಸ್ಥೆ ಮಾಡಲಾಗಿದ್ದು, ಶತ್ರು ಪಾಳಯಕ್ಕೆ ಇದೊಂದು ಸ್ಪಷ್ಟ ಸಂದೇಶವಾಗಿದೆ. ಗಡಿಯಾಚೆಯಿಂದ ಯಾವುದೇ ದುಸ್ಸಾಹಸ ನಡೆಸಿದರೆ ತುರ್ತಾಗಿ ಎದುರಿಸಲು ಏರ್​ಸ್ಟ್ರಿಪ್ ನೆರವಾಗಲಿದೆ. ಯುದ್ಧದಂಥ ಸಮಯದಲ್ಲಿ ತುರ್ತಾಗಿ ಹೆದ್ದಾರಿಯನ್ನೇ ಕಾರ್ಯಾಚರಣೆಗೆ ಬಳಸುವುದು ಇದರ ಉದ್ದೇಶವಾಗಿದೆ. ಇದು ಮೂರು ಕಿ.ಮೀ. ಉದ್ದದ ರಸ್ತೆ-ಕಮ್​ಏರ್ ಸ್ಟ್ರಿಪ್ ನಿರ್ಮಾಣ ಮಾಡಲಾಗಿದೆ. ಗಡಿ ತಂಟೆ ಕೆದಕುವ ಪಾಕಿಸ್ತಾನ ಮತ್ತು ಚೀನಾಕ್ಕೆ ಇದೊಂದು ಎಚ್ಚರಿಕೆಯ ಗಂಟೆ ಎಂದು ವಿಶ್ಲೇಷಿಸಲಾಗಿದೆ. ತುರ್ತು ಇಳಿಕೆ ಸೌಕರ್ಯದ (ಇಎಲ್​ಎಫ್) ಮೇಲೆ ವಿಮಾನದ ವೈವಿಧ್ಯಮಯ ಕಾರ್ಯಾಚರಣೆಗಳನ್ನು ಉಭಯ ಸಚಿವರು ವೀಕ್ಷಿಸಿದರು. ಸುಖೋಯ್-30ಎಂಕೆಐ ಫೈಟರ್ ಜೆಟ್ ಕೂಡ ಇಎಲ್​ಎಫ್ ಮೇಲೆ ಅಣಕು ಲ್ಯಾಂಡಿಂಗ್ ನಡೆಸಿತು. ಮೂರೂ ಪಡೆಗಳ ಮಹಾ ದಂಡ ನಾಯಕ (ಸಿಡಿಎಸ್) ಬಿಪಿನ್ ರಾವತ್, ಐಎಎಫ್ ಮುಖ್ಯಸ್ಥ ಆರ್.ಕೆ. ಭದೌರಿಯಾ ಕೂಡ ವೀಕ್ಷಿಸಿದರು.

  • ಒಂದು ಮಿಲಿಟರಿ ಸಾರಿಗೆ ವಿಮಾನ, ಎಂಐ-17ವಿ5 ಹೆಲಿಕಾಪ್ಟರ್ ಕೂಡ ಲ್ಯಾಂಡ್ ಆದವು. ಇದನ್ನು ವೀಕ್ಷಿಸಲು ಅಪಾರ ಜನರು ನೆರೆದಿದ್ದರು.
  • ಹೆದ್ದಾರಿಯು ಒಂದು ತುರ್ತು ಮಿಲಿಟರಿ ವಾಯುನೆಲೆಯಾಗಿ ಸಂಪೂರ್ಣ ವಾಗಿ ಕಾರ್ಯಾಚರಿಸಲು ಸಜ್ಜಾಗಿದೆ
  • 20 ತುರ್ತು ಲ್ಯಾಂಡಿಂಗ್ ಸ್ಟ್ರಿಪ್​ಗಳನ್ನು ದೇಶದಾದ್ಯಂತ ಅಭಿವೃದ್ಧಿ ಪಡಿಸಲು ಯೋಜನೆ.
  • ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ನೆರವಿನಿಂದ ಅನೇಕ ಹೆಲಿಪ್ಯಾಡ್​ಗಳನ್ನು ಕೂಡ ರಚಿಸಲಾಗುತ್ತಿದೆ.
  • ದೇಶದ ಭದ್ರತಾ ಮೂಲಸೌಕರ್ಯ ಬಲಪಡಿಸುವಲ್ಲಿ ಇದೊಂದು ಪ್ರಮುಖ ಹೆಜ್ಜೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net