ಢಾಕಾದ ಶಾಲೆಯ ಮೇಲೆ ವಾಯುಪಡೆ ವಿಮಾನ ಪತನ; 16 ಮಂದಿ ಸಾವು, ಹಲವರಿಗೆ ಗಾಯ| training-jet

Untitled design
Published on

ಢಾಕಾ; ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನವೊಂದು ಢಾಕಾದ ಉತ್ತರ ಪ್ರದೇಶದ ಮೈಲ್‌ಸ್ಟೋನ್ ಶಾಲಾ ಆವರಣಕ್ಕೆ ಅಪ್ಪಳಿಸಿದ ಪರಿಣಾಮ ಹದಿನಾರು ಮಂದಿ ಸಾವನ್ನಪ್ಪಿದ್ದು, ಹಲವು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು (21) ಮಧ್ಯಾಹ್ನ 1:06 ಕ್ಕೆ ಎಫ್ -7 ಬಿಜಿಐ ತರಬೇತಿ ವಿಮಾನವು ಹೊರಟ ಸ್ವಲ್ಪ ಸಮಯದ ಬಳಿಕ ಕಾಲೇಜು ಕ್ಯಾಂಪಸ್‌ಗೆ ಅಪ್ಪಳಿಸಿತು ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ಕಚೇರಿಯು ಸಂಕ್ಷಿಪ್ತ ಹೇಳಿಕೆಯಲ್ಲಿ ಪತನಗೊಂಡ ಎಫ್ -7 ಬಿಜಿಐ ವಿಮಾನವು ವಾಯುಪಡೆಗೆ ಸೇರಿದ್ದು ಎಂದು ದೃಢಪಡಿಸಿದೆ.

ವಿದ್ಯಾರ್ಥಿಗಳು ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿನಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಹಲವರನ್ನ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಗ್ನಿಶಾಮಕ ಸೇವಾ ಕೇಂದ್ರ ನಿಯಂತ್ರಣ ಕೊಠಡಿಯ ಕರ್ತವ್ಯ ಅಧಿಕಾರಿ ಲಿಮಾ ಖಾನಮ್ ತಿಳಿಸಿದ್ದಾರೆ.

ವಿಮಾನ ಅಪಘಾತಕ್ಕೀಡಾದ ನಂತರ ಬೆಂಕಿ ಹೊತ್ತಿಕೊಂಡಿದೆ. ಸಾಕಷ್ಟು ದೂರದವರೆಗೆ ದಟ್ಟ ಹೊಗೆ ಆವರಿಸಿತ್ತು ಎನ್ನಲಾಗಿದೆ. ಈ ಘಟನೆ ಸಂಭವಿಸುತ್ತಿದ್ದಂತೆ ಆಂಬ್ಯುಲೆನ್ಸ್‌ಗಳು ಮತ್ತು ವಾಯುಪಡೆಯ ಹೆಲಿಕಾಪ್ಟರ್‌ಗಳು ಸೇರಿದಂತೆ ಎಂಟು ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ಹತೋಟಿಗೆ ತರಲು ಹರಸಾಹಸ ಪಟ್ಟಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net