ದ್ವಿಚಕ್ರ ವಾಹನಕ್ಕೂ ಏರ್​ಬ್ಯಾಗ್ ವ್ಯವಸ್ಥೆ!

national 01
Published on

ನವದೆಹಲಿ: ಸ್ಕೂಟರ್ ಮತ್ತು ಮೋಟಾರ್ ಸೈಕಲ್​ಗಳಂಥ ದ್ವಿಚಕ್ರ ವಾಹನಗಳ ಸವಾರರ ಸುರಕ್ಷತೆಗಾಗಿ ಕಾರ್​ಗಳಲ್ಲಿ ಇರುವ ರೀತಿಯಲ್ಲಿ ಏರ್​ಬ್ಯಾಗ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಪಿಯಾಜ್ಜಿಯೋ ಸಮೂಹವು ವಾಹನ ಸುರಕ್ಷತಾ ಸಾಧನಗಳ ಕಂಪನಿ ಆಟೋಲಿವ್​ನೊಂದಿಗೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ.

ಮಿಲಿಸೆಕೆಂಡ್ ಅವಧಿಯೊಳಗೆ ಏರ್​ಬ್ಯಾಗ್ ತೆರೆದುಕೊಂಡು ಚಾಲಕರು ಹಾಗೂ ಹಿಂಬದಿ ಸವಾರರಿಗೆ ರಕ್ಷಣೆ ಒದಗಿಸಲಿದೆ. ವಾಹನದ ಚೌಕಟ್ಟಿನ ಮೇಲ್ಭಾಗದಲ್ಲಿ ಏರ್​ಬ್ಯಾಗ್ ಅಳವಡಿಸಲಾಗುತ್ತದೆ. ಅವಘಡ ಸಂಭವಿಸಿದ ಮಿಲಿ ಸೆಕೆಂಡ್​ನೊಳಗೆ ಅದು ಕಾರ್ಯಾಚರಿಸಲಿದೆ ಎಂದು ಮೂಲಗಳು ತಿಳಿಸಿವೆ. ಆಟೋಲಿವ್ ಈಗಾಗಲೇ ಸುಧಾರಿತ ಸಿಮ್ಯುಲೇಶನ್ ಸಾಧನಗಳಿಂದ ಇಂಥ ಏರ್​ಬ್ಯಾಗ್​ನ ಆರಂಭಿಕ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ಉತ್ಪನ್ನದ ಪೂರ್ಣ ಪ್ರಮಾಣದ ಪರೀಕ್ಷೆಯನ್ನೂ ನಡೆಸಿದೆ.

ಪಿಯಾಜ್ಜಿಯೋ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಏರ್​ಬ್ಯಾಗ್​ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಆಟೋಲಿವ್​ಗೆ ನೆರವಾಗಲಿದೆ. ಸದ್ಯೋಭವಿಷ್ಯದಲ್ಲಿ ವಾಣಿಜ್ಯ ಮಟ್ಟದಲ್ಲಿ ಅದರ ಉತ್ಪಾದನೆಗೆ ಕೂಡ ಅದು ಸಹಾಯಕವಾಗಲಿದೆ. ಹೆಚ್ಚು ಅಪಘಾತ ನಡೆಯುವ ರಸ್ತೆಗಳಲ್ಲಿ ಸಾಗುವ ದ್ವಿಚಕ್ರ ವಾಹನಗಳ ಸವಾರರಿಗೆ ಉತ್ತಮ ಸುರಕ್ಷತೆ ಒದಗಿಸುವುದು ಏರ್​ಬ್ಯಾಗ್​ನ ಗುರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net