ಇಂಧನ ಸೋರಿಕೆಯಿಂದ ತುರ್ತು ಭೂಸ್ಪರ್ಶ ಮಾಡಿದ ಏರ್​ ಏಷ್ಯಾ ವಿಮಾನ

air asia
Published on

ಹೈದ್ರಾಬಾದ್​: ಇಂಧನ ಸೋರಿಕೆ ಹಿನ್ನೆಲೆಯಲ್ಲಿ ಏರ್​ ಏಷ್ಯಾ ವಿಮಾನ ಹೈದ್ರಾಬಾದ್​ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಜೈಪುರದಿಂದ ಹೈದ್ರಾಬಾದ್​ಗೆ ಆಗಮಿಸಿದ ವಿಮಾನದ ಇಂಜಿನ್​​ನಲ್ಲಿ ಇಂಧನ ಸೋರಿಕೆಯಾದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನದಲ್ಲಿ 76 ಮಂದಿ ಪ್ರಯಾಣಿಕರಿದ್ದೂ ಎಲ್ಲರೂ ಸುರಕ್ಷಿತವಾಗಿದ್ದಾರೆ.

ಜೈಪುರದಿಂದ ಮಧ್ಯಾಹ್ನ 1.25ಕ್ಕೆ ಹೈದ್ರಾಬಾದ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್​ ಏಷ್ಯಾ ವಿಮಾನದಲ್ಲಿ ಇಂಧನ ಸೋರಿಕೆಯಾಗುತ್ತಿತ್ತು. ಇದನ್ನು ಗಮನಿಸಿದ ಪೈಲಟ್​ ಕೂಡಲೇ ಹೈದ್ರಾಬಾದ್​ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿ ತುರ್ತು ಭೂಸ್ಪರ್ಶ​ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು. ಇದಕ್ಕೆ ಒಪ್ಪಿದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಇತರೆ ಎಲ್ಲ ಕೆಲಸಗಳನ್ನು ರದ್ದುಪಡಿಸಿದರು. ವಿಮಾನ ಸುರಕ್ಷಿತವಾಗಿ ಇಳಿಯುವವರೆಗೆ ಯಾವುದೇ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಿಲ್ಲ.

ವಿಮಾನ ನಿಲ್ದಾಣ ಅಧಿಕಾರಿಗಳಿಂದ ತುರ್ತು ಭೂಸ್ಪರ್ಶಕ್ಕೆ ಅವಕಾಶ ಸಿಕ್ಕ ಕೂಡಲೇ ಪೈಲೆಟ್​ ಇಂಧನ ಸೋರಿಕೆಯಾಗುತ್ತಿದ್ದ ಇಂಜಿನ್​ ಸ್ಥಗಿತಗೊಳಿಸಿ ಮತ್ತೊಂದು ಇಂಜಿನ್​ನಲ್ಲಿ ವಿಮಾನವನ್ನು ಸುಕ್ಷಿತವಾಗಿ ಇಳಿಸಿದರು.

ವಿಮಾನದ ಇಂಜಿನ್​ನಲ್ಲಿ ಇಂಧನ ಸೋರಿಕೆಯಾಗಿದ್ದನ್ನು ತನಿಖೆ ನಡೆಸಲು ಏರ್​ ಏಷ್ಯಾ ಮುಂದಾಗಿದೆ. ಇಂಧನ ಸೋರಿಕೆಯ ಎಲ್ಲ ಮಾಹಿತಿಯನ್ನು ಡಿಜಿಸಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net