ಎನ್​ಡಿಎ ಅಧಿಕಾರಕ್ಕೆ ಬಂದ ತಕ್ಷಣ ಅಕ್ರಮ ವಲಸಿಗರು ಗಡಿಪಾರು: ಅಮಿತ್​ ಷಾ | Amit Shah

Amit Shah
Published on

ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ಪ್ರತಿ ಚುನಾವಣಾ ಪ್ರಚಾರ ಸಭೆಯಲ್ಲಿ ಸೇರುತ್ತಿರುವ ಜನಸಮೂಹವೇ ಎನ್​ಡಿಎ ಮೈತ್ರಿಕೂಟದ ಗೆಲುವಿನ ಸೂಚನೆಯಾಗಿದ್ದು, ಅಧಿಕಾರಕ್ಕೆ ಬರುತಿದ್ದಂತೆ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗುವುದು ಎಂದು ಕೇಂದ್ರ ಸಚಿವ ಅಮಿತ್​ ಷಾ (Amit Shah) ಭರವಸೆ ನೀಡಿದರು.

ಪೂರ್ಣಿಯಾದಲ್ಲಿ ನಡೆದ ಎನ್​ಡಿಎ ಅಭ್ಯರ್ಥಿಗಳ ಪರ ಪ್ರಚಾರದ ವೇಳೆ ಎನ್​ಡಿಟಿವಿಯೊಂದಿಗೆ ಮಾತನಾಡಿದ ಷಾ, ಮೈತ್ರಿಕೂಟ 160 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದರು.

ಮತ್ತೊಮ್ಮೆ ಬಿಹಾರದ ಜನರು ಎನ್‌ಡಿಎ ಮೈತ್ರಿಕೂಟವನ್ನೇ ಬಯಸುತ್ತಾರೆ ಎಂಬುದಕ್ಕೆ ದಾಖಲೆಯ ಮತದಾನವೇ ಸ್ಪಷ್ಟ ನಿದರ್ಶನವಾಗಿದೆ, ವಿರೋಧ ಪಕ್ಷಗಳು ಮತ್ತೇ ಅಧಿಕಾರಕ್ಕೆ ಬರುವುದು ಮತ್ತು ರಾಜ್ಯವನ್ನು ಹಾಳುಮಾಡುವುದು ಅವರಿಗೆ ಇಷ್ಟವಿಲ್ಲ. ಸೀಮಾಂಚಲ್‌ನಲ್ಲಿ ಅಕ್ರಮ ವಲಸಿಗರದ್ದು ಪ್ರಮುಖ ಸಮಸ್ಯೆಯಾಗಿದ್ದು, ಅವರನ್ನು ಇಲ್ಲಿಂದ ಓಡಿಸುವ ದಿನ ದೂರವಿಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್​ ನಾಯಕತ್ವದಲ್ಲಿ, ನಾವು ಜನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದೇವೆ. ಎರಡು ಸರ್ಕಾರಗಳು ಬಡವರಿಗಾಗಿಯೇ ಕೆಲಸ ಮಾಡಿವೆ. ಮೊದಲ ಸ್ಥಿತಿ ಬದಲಾಗಿದ್ದ, ವ್ಯವಹಾರಗಳು ಪುನರಾರಂಭಗೊಂಡಿವೆ ಮತ್ತು ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದರು.

ಜಮುಯಿ ಮತ್ತು ಭಾಗಲ್ಪುರದಲ್ಲಿ ಅಮಿತ್​ ಷಾ ಮಾತು

ಜಮುಯಿ ಮತ್ತು ಭಾಗಲ್ಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಷಾ, ಜಂಗಲ್​ ರಾಜ್​ ಆಡಳಿತ ಆಳ್ವಿಕೆ ಬರಲು ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು. ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಮುಯಿ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು. ನಾಲ್ಕೂ ಸ್ಥಾನಗಳು ಎನ್‌ಡಿಎಗೆ ಗೆಲುವು ಸಾಧಿಸುವಂತೆ ನೋಡಿಕೊಳ್ಳಲು ಜನರಿಗೆ ಮನವಿ ಮಾಡಿದರು.

ನಕ್ಸಲ್ ಪ್ರಭಾವವನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ನಕ್ಸಲ್ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಜಮುಯಿನಂತಹ ಪ್ರದೇಶಗಳಲ್ಲಿ ನಕ್ಸಲರು ಧನ್ಬಾದ್ ಪಾಟ್ನಾ ಎಕ್ಸ್‌ಪ್ರೆಸ್ ಅನ್ನು ಅಪಹರಿಸಿ ಮೂವರನ್ನು ಕೊಂದ ಘಟನೆಯನ್ನು ನೆನಪಿಸಿಕೊಂಡರು. ನಾವು ಗೆದ್ದರೆ, ಬಿಹಾರವನ್ನು ಪ್ರವಾಹದಿಂದ ಮುಕ್ತಗೊಳಿಸಲು ಹೊಸ ಇಲಾಖೆಯನ್ನು ರಚಿಸುತ್ತೇವೆ. ಲಾಲು ಅವರ ಮಗ ಗೆದ್ದರೆ ಅಪಹರಣ ಎಂಬ ಹೊಸ ಇಲಾಖೆಯನ್ನೇ ತೆರೆಯಲಿದ್ದಾರೆ ಎಂದು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net