ಮಗುವಿನ ಶ್ವಾಸಕೋಶದಲ್ಲಿ 4 ಸೆ.ಮೀ. ಸೂಜಿ ಪತ್ತೆ! ವೈದ್ಯರೇ ದೇವರೆಂದ ನೆಟ್ಟಿಗರು

Untitled design (60)
Published on

ಭುವನೇಶ್ವರ: ಭುವನೇಶ್ವರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ವೈದ್ಯರು 9 ವರ್ಷದ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿದ್ದ ನಾಲ್ಕು ಸೆಂಟಿಮೀಟರ್ ಉದ್ದದ ಹೊಲಿಗೆ ಸೂಜಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಮಗುವಿನ ಜೀವ ಉಳಿಸಿದ ವೈದ್ಯರ ತಂಡಕ್ಕೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈದ್ಯರ ಹೇಳಿಕೆಯ ಪ್ರಕಾರ, ಆಸ್ಪತ್ರೆಯ ಮಕ್ಕಳ ವಿಭಾಗವು ಸೂಜಿಯನ್ನು ಹೊರತೆಗೆಯಲು ಬ್ರಾಂಕೋಸ್ಕೋಪಿಕ್ ಹಸ್ತಕ್ಷೇಪದ ವಿಧಾನವನ್ನು ನಿರ್ವಹಿಸಿ, 9 ವರ್ಷದ ಮಗುವಿನ ಜೀವವನ್ನು ಉಳಿಸಿದೆ. ಯಾವುದೇ ವಿದೇಶಿ ಶಸ್ತ್ರಚಿಕಿತ್ಸೆಯಿಲ್ಲದೆ ಇಂತಹ ತೀಕ್ಷ್ಣವಾದ ವಸ್ತುವನ್ನು ತೆಗೆದುಹಾಕುವಲ್ಲಿ ಒಡಿಶಾದ ಶಿಶುವೈದ್ಯಕೀಯ ಕೇಂದ್ರವೇ ಮುಂಚೂಣಿಯಲ್ಲಿದೆ ಎಂದು ವರದಿ ಉಲ್ಲೇಖಿಸಿದೆ.

ಮಗುವಿನ ಶ್ವಾಸಕೋಶದ ಎಡ ಕೆಳಗಿನ ಲೋಬ್ ಶ್ವಾಸನಾಳದ ಪಾರ್ಶ್ವದ ಭಾಗದಲ್ಲಿ ಸುಮಾರು ನಾಲ್ಕು ಸೆಂಟಿಮೀಟರ್ ಉದ್ದದ ಹೊಲಿಗೆ ಸೂಜಿ ಸಿಲುಕಿಕೊಂಡಿರುವುದನ್ನು ಪತ್ತೆಹಚ್ಚಿದ ಡಾ. ರಶ್ಮಿ ರಂಜನ್ ದಾಸ್, ಡಾ. ಕೃಷ್ಣ ಎಂ. ಗುಲ್ಲಾ, ಡಾ. ಕೇತನ್ ಮತ್ತು ಡಾ. ರಾಮಕೃಷ್ಣ ಅವರನ್ನೊಳಗೊಂಡ ಶಿಶುವೈದ್ಯರ ತಂಡವು ಯಾವುದೇ ತೊಡಕುಗಳನ್ನು ಎದುರಿಸದೆ ಸೂಜಿಯನ್ನು ಸೂಕ್ಷ್ಮವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

ವೈದ್ಯಕೀಯ ಪ್ರಕ್ರಿಯೆಯ ಕುರಿತು ಮಾತನಾಡಿದ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಅಶುತೋಷ್ ಬಿಸ್ವಾಸ್, "ಸಂಪೂರ್ಣ ವೈದ್ಯಕೀಯ ಪ್ರಕ್ರಿಯೆಯು 1 ಗಂಟೆಗಳ ಕಾಲ ನಡೆಯಿತು. ಕಾರ್ಯವಿಧಾನದ ನಂತರ, ಮಗುವನ್ನು ನಾರ್ಮಲ್​ ವಾರ್ಡ್​ಗೆ ದಾಖಲಿಸಲಾಗಿದೆ. ಸದ್ಯ ಈಗ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net