

ಬೆಂಗಳೂರು: ಬೆಂಗಳೂರಿನಲ್ಲಿ ನಿರುಪಯುಕ್ತ ಸ್ಥಿತಿಯಲ್ಲಿರುವ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅನ್ನು ಕ್ವಾಂಟಮ್ ಕಂಪ್ಯೂಟಿಂಗ್ ಲ್ಯಾಬ್ ಆಗಿ ಪರಿವರ್ತಿಸಲು ಅನುಮತಿ ನೀಡುವುದಾಗಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್ ಭರವಸೆ ನೀಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಪತಿಯಾಗಿ ಎರಡನೇ ಅವಧಿಗೆ ನೇಮಕಗೊಂಡಿರುವ ಪ್ರೊ.ಎಸ್. ವಿದ್ಯಾಶಂಕರ್ ಅವರನ್ನು ಸೆನೆಟ್ ಸದಸ್ಯರು ವಿವಿ ಪ್ರಾದೇಶಿಕ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾಶಂಕರ್ ಅವರು ಕ್ವಾಂಟಮ್ ಕಂಪ್ಯೂಟಿಂಗ್ ಲ್ಯಾಬ್ ಆಗಿ ಪರಿವರ್ತಿಸುವಂತೆ ಮನವಿ ನೀಡಿದ್ದಾರೆ. ಅವರ ಮನವಿಯನ್ನು ಪುರಸ್ಕರಿಸಿ ಮುಂದಿನ ತಿಂಗಳಿನಿಂದಲೇ ಆ ಕಾರ್ಯ ಆರಂಭಿಸುವಂತೆ ಸೂಚಿಸಿದರು. ಇಂದು ಕ್ವಾಂಟಮ್ ಕಂಪ್ಯೂಟಿಂಗ್ ಹೆಚ್ಚು ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಿ ಆರಂಭಿಸುವುದರಿಂದ ಹೆಚ್ಚು ಜನರಿಗೆ ಅನುಕೂಲವಾಗಲಿದೆ ಎಂದರು.
ದೇಶದಲ್ಲಿ ಪ್ರತಿ ವರ್ಷ 1.5 ಮಿಲಿಯನ್ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಆದರೂ, ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳ ಪ್ರಮಾಣ (ಜಿಇಆರ್) ಶೇ.32.5 ಅಷ್ಟೇ ಇದೆ. ಕಳೆದ 50 ವರ್ಷದಿಂದಲೂ ಈ ಪ್ರಮಾಣ ಬದಲಾಗಿಲ್ಲ. ಕೊರಿಯಾದಲ್ಲಿ ಈ ಪ್ರಮಾಣ ಶೇ.96 ಇದೆ. ಇದನ್ನು ಹೆಚ್ಚು ಮಾಡಲು ಇದೀಗ ಸುವರ್ಣ ಅವಕಾಶ ಸಿಕ್ಕಿದೆ ಎಂದರು.
ಉದ್ಯೋಗಿಗಳನ್ನು ಹುಡುಕುವುದೇ ಕಷ್ಟ:
ಸಿಂಚ್ ಇಂಡಿಯಾ ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ(ಸಿಎಂಒ) ಸುಂದರ್ ಮಡಕಶಿರ ಮಾತನಾಡಿ, ಇಂದು ಬಹುತೇಕ ಉದ್ಯೋಗಿಗಳು 40 ವರ್ಷಕ್ಕೆ ನಿವೃತ್ತಿ ಹೊಂದಲು ಬಯಸುತ್ತಿದ್ದಾರೆ. ಇನ್ನು ಶೇ.70 ಉದ್ಯೋಗಿಗಳು ಹವ್ಯಾಸಿ ವೃತ್ತಿಪರರಾಗಿ ಕೆಲಸ ಮಾಡಲು ಇಚ್ಚಿಸುತ್ತಿದ್ದಾರೆ. ಈ ಎಲ್ಲ ಪ್ರಕರಣಗಳ ಮಧ್ಯೆ ಉತ್ತಮ ಉದ್ಯೋಗಿಗಳನ್ನು ಹುಡುಕುವುದೇ ಕಷ್ಟವಾಗಿದೆ. ವಿದ್ಯಾರ್ಥಿಗಳು ನೆಟ್‌ವರ್ಕ್ ರೂಪಿಸಿಕೊಳ್ಳಬೇಕು. ಇದೇ ಅವರಿಗೆ ಮುಂದೆ ನೆಟ್ ವರ್ಥ್ ಆಗಲಿದೆ ಎಂದರು.
ಕುಲಪತಿ ವಿದ್ಯಾಶಂಕರ್ ಅವರು ಮೊದಲ ಅವಧಿಯಲ್ಲಿ ತೆಗೆದುಕೊಂಡಿರುವ ಪೂರಕ ಪರೀಕ್ಷೆ, ಶೀಘ್ರವಾಗಿ ಫಲಿತಾಂಶ ನೀಡುವುದು ಸೇರಿ ಹಲವು ಪ್ರಮುಖ ನಿರ್ಧಾರಗಳ ಬಗ್ಗೆ ಸೆನೆಟ್ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಬೆಂಗಳೂರು ವಿಟಿಯು ಪ್ರಾದೇಶಿಕ ಕಚೇರಿಯ ನಿರ್ದೇಶಕ ಎಚ್.ಆರ್. ಸುದರ್ಶನ್ ರೆಡ್ಡಿ ಉಪಸ್ಥಿತರಿದ್ದರು.
ನನ್ನನ್ನು ಎರಡನೇ ಬಾರಿಗೆ ಕುಲಪತಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನೇ ಎಲ್ಲ ಕೆಲಸವನ್ನು ಮಾಡಿದ್ದೇನೆಂದು ಹೇಳುವುದಿಲ್ಲ. ನಮ್ಮ ಸೆನೆಟ್, ಕಾರ್ಯನಿರ್ವಾಹಕ ಪರಿಷತ್ತಿನ ಸದಸ್ಯರು ಮತ್ತು ಸಿಬ್ಬಂದಿ ಸಹಕಾರದಿಂದ ಎಲ್ಲವೂ ಸಾಧ್ಯವಾಗಿದೆ. ಇದೇ ರೀತಿ ಮುಂದೆ ಕೂಡ ಇರಲಿ. - ಪ್ರೊ.ಎಸ್. ವಿದ್ಯಾಶಂಕರ್, ವಿಟಿಯು ಕುಲಪತಿ