

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುಗಮ ಸಂಚಾರ ಮತ್ತು ವಾಹನ ಸವಾರರ ಪ್ರಯಾಣದ ಸಮಯ ತಗ್ಗಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ‘ಅಡಾಪ್ಟಿವ್ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್’ (ಬಿಎಟಿಸಿಎಸ್) ಅನ್ನು ಬೆಂಗಳೂರು ಸಂಚಾರ ಪೊಲೀಸರು ಜಾರಿಗೆ ತಂದಿದ್ದಾರೆ.
ಹೊಸ ತಂತ್ರಾಂಶ ಬಳಸಿಕೊಂಡು ಸಂಚಾರದಟ್ಟಣೆಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ರಿಯಲ್-ಟೈಮ್ ಆಧಾರಿತ ಬಿಎಟಿಸಿಎಸ್ ಮೂಲಕ ಸಂಚಾರ ನಿರ್ವಹಣೆಯನ್ನು ವಿನೂತನ ರೀತಿಯಲ್ಲಿ ನಿಯಂತ್ರಿಸುವ ಗುರಿ ಹೊಂದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ಮಾತನಾಡಿ, ನಗರದಲ್ಲಿ 435 ಜಂಕ್ಷನ್‌ಗಳಿವೆ. ಮೇ ತಿಂಗಳಿನಲ್ಲಿ ಆರಂಭವಾದ ಬಿಎಟಿಸಿಎಸ್ ಯೋಜನೆಯಡಿ 136 ಜಂಕ್ಷನ್‌ಗಳನ್ನು ನವೀಕರಿಸಲಾಗಿದ್ದು, 29 ಜಂಕ್ಷನ್‌ಗಳು ಸೇರಿ 165 ಟ್ರಾಫಿಕ್ ಸಿಗ್ನಲ್‌ಗಳನ್ನು ಒಳಗೊಂಡಿದೆ ಎಂದರು.
ನಗರ ವ್ಯಾಪ್ತಿ ಸುಗಮ ಮತ್ತು ಸುರಕ್ಷಿತ ಸಂಚಾರ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತಷ್ಟು ಅಪ್ಟಿಮೈಸೇಶನ್ ಮತ್ತು ಫೈನ್‌ಟ್ಯೂನಿಂಗ್ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನಗರದ ಕೆ.ಆರ್. ರಸ್ತೆ ಸೇರಿ ಪ್ರಮುಖ ಕಾರಿಡಾರ್‌ಗಳಲ್ಲಿ ಪ್ರಯಾಣದ ಸಮಯವು ಇಳಿಕೆಯಾಗಿದೆ. ಸಂಚಾರ ನಿರ್ವಹಣೆಯನ್ನು ವಾಹನಚಾಲಿತ ಮತ್ತು ಹೊಂದಾಣಿಕೆಯ ಸಿಗ್ನಲ್ ನಿಯಂತ್ರಣದೊಂದಿಗೆ ಬದಲಾಯಿಸಲಾಗಿದೆ. ಆ ಪ್ರದೇಶದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ವಿವರಿಸಿದರು.
60 ಜಂಕ್ಷನ್‌ನಲ್ಲಿ ಜಾರಿ
ಬಸವನಗುಡಿ, ಜಯನಗರ, ಜೆ.ಪಿ. ನಗರ ಮತ್ತು ಹಡ್ಸನ್ ಸರ್ಕಲ್ ಸೇರಿ ಪ್ರಮುಖ 60 ಜಂಕ್ಷನ್‌ಗನ್ನು ನವೀಕರಿಸಲಾಗಿದೆ. ಇನ್ನುಳಿದ ಜಂಕ್ಷನ್‌ಗಳು 2025ರ ಜನವರಿ ಒಳಗಾಗಿ ನವೀಕರಣವಾಗಲಿದೆ.
ಟಿಎಂಸಿಯಿಂದ ನಿಯಂತ್ರಣ
ಬಿಎಟಿಸಿಎಸ್ ಸಿಗ್ನಲ್‌ಗಳನ್ನು ಟ್ರಾಫಿಕ್ ನಿರ್ವಹಣ ಕೇಂದ್ರದಿಂದ (ಟಿಎಂಸಿ) ನಿರ್ವಹಣೆ ಮಾಡಬಹುದು. ಪ್ರತಿ ಸಿಗ್ನಲ್‌ನಲ್ಲಿ ಮಾನವಚಾಲಿತ, ವಾಹನ ಸಂಖ್ಯೆ ಆಧಾರಿತ ಮತ್ತು ಬಿಎಟಿಸಿಎಸ್ ಮೂಡ್‌ನಲ್ಲಿ ನಿರ್ವಹಣೆ ಮಾಡಬಹುದು. ಯಾವ ಸಿಗ್ನಲ್ ಯಾವ ಮೂಡ್‌ನಲ್ಲಿ ನಿರ್ವಹಿಸಿದರೆ ಒಳಿತು ಎಂಬುದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಆದಷ್ಟು ಮಾನವಚಾಲಿತ ಸಿಗ್ನಲ್ ನಿರ್ವಹಣೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಇದಲ್ಲದೆ, ಎಲ್ಲ ಸಿಗ್ನಲ್‌ಗಳನ್ನು ಸಂಯೋಜನೆ ಮಾಡಿದ್ದು, ಏಕಕಾಲಕ್ಕೆ 6-8 ಸಿಗ್ನಲ್‌ಗಳನ್ನು ಗ್ರೀನ್ ಮಾಡಲು ಅವಕಾಶವಿದೆ.
ಬಿಟಿಸಿಎಸ್ ಅನುಕೂಲ ಏನು?
* ಬಿಎಟಿಸಿಎಸ್ ಬಳಕೆ ಹಿಂದಿನ ಟ್ರಾಫಿಕ್ ನಿರ್ವಹಣೆಗಿಂತ ವಿಭಿನ್ನ
* ಸಂಚಾರ ಸಾಂದ್ರತೆಯ ಆಧಾರದ ಮೇಲೆ ಸಿಗ್ನಲ್ ಸಮಯ ಹೊಂದಿಸುತ್ತದೆ
* ಜಂಕ್ಷನ್‌ಗಳಲ್ಲಿ ಸಂಚಾರದಟ್ಟಣೆ ಇಳಿಕೆಯಾಗಿ ಸುಗಮ ಸಂಚಾರ
* ಕೇಂದ್ರೀಯ ನಿಯಂತ್ರಣ ಕೊಠಡಿಯಿಂದ ಟ್ರಾಫಿಕ್ ಸಿಗ್ನಲ್‌ಗಳ ಮೇಲ್ವಿಚಾರಣೆ
* ಆಂಬುಲೆನ್ಸ್ ಸೇರಿ ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೆ ಆದ್ಯತೆ