

ಅಹಮದಾಬಾದ್: ಗುಜರಾತ್ನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಸಮಯದಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿದ 56 ವರ್ಷದ ಉದ್ಯಮಿ ರಾಜು ಪಟೇಲ್ ಅವರು ರಕ್ಷಣಾ ಕಾರ್ಯಾಚರಣೆಗೆ ನೆರವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಿ.ಜೆ ವೈದ್ಯಕೀಯ ಕಾಲೇಜಿಗೆ ಏರ್ ಇಂಡಿಯಾ ವಿಮಾನ ಅಪ್ಪಳಿಸಿದ ಸುದ್ದಿ ಹೊರಬೀಳುತ್ತಿದ್ದಂತೆ ಸಹಾಯಕ್ಕೆ ಬಂದ ರಾಜು ಅವರು ಘಟನೆ ಸಂಭವಿಸಿದಾಗ ದಟ್ಟ ಹೊಗೆ ಹಾಗೂ ಬೆಂಕಿ ಜ್ವಾಲೆಯ ನಡುವೆ ಗಾಯಾಳುಗಳನ್ನು ಸ್ಥಳಾಂತರಿಸಲು ಸಹಾಯ ಮಾಡಿದರು. ನಂತರ ಅವಶೇಷಗಳಲ್ಲಿದ್ದ ಚಿನ್ನದ ಆಭರಣ, ನಗದು ಹಾಗೂ ಇತರೆ ದಾಖಲೆಗಳಿಗಾಗಿ ಶೋಧಿಸುವ ಕೆಲಸ ಮಾಡಿ, ಅದನ್ನು ತನಿಖಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ.
ಸಂಜೆ 4 ಗಂಟೆಯ ಹೊತ್ತಿಗೆ ರಕ್ಷಣಾ ಕಾರ್ಯ ಬಹುತೇಕ ಪೂರ್ಣಗೊಂಡ ಬಳಿಕ, ನಮ್ಮ ತಂಡವು ಮತ್ತೊಂದು ನಿರ್ಣಾಯಕ ಕಾರ್ಯಕ್ಕೆ ಕೈಹಾಕಿತು. ಎಲ್ಲೆಡೆ ಹರಡಿಕೊಂಡಿದ್ದ ಸುಟ್ಟ ಚೀಲಗಳನ್ನು ಶೋಧಿಸಲು ಕಾರ್ಯಾಚರಣೆ ಮುಂದುವರೆಸಿದೆವು. ಈ ವೇಳೆ ಬಳೆಗಳು ಮತ್ತು ಇತರ ಆಭರಣಗಳ ಜೊತೆಗೆ ಪೆಟ್ಟಿಗೆಗಳಲ್ಲಿ 70 ತೊಲ ಚಿನ್ನದ ಆಭರಣಗಳು ಸಿಕ್ಕಿವೆ. ಚೀಲಗಳಿಂದ ನಮಗೆ 80,000 ರೂ. ನಗದು, ಭಗವದ್ಗೀತೆಯ ಪ್ರತಿ ಮತ್ತು ಪಾಸ್‌ಪೋರ್ಟ್‌ಗಳು ಸಹ ಸಿಕ್ಕಿದ್ದು, ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಉದ್ಯಮಿ ರಾಜು ಪಟೇಲ್ ಮಾತನಾಡಿದ್ದು, ಬೆಂಕಿ ತುಂಬಾ ತೀವ್ರವಾಗಿದ್ದ ಕಾರಣ, ಮೊದಲ 15 ರಿಂದ 20 ನಿಮಿಷಗಳ ಕಾಲ ನಾವು ಹತ್ತಿರ ಬರಲು ಸಾಧ್ಯವಾಗಲಿಲ್ಲ. ಆದರೆ ಅಗ್ನಿಶಾಮಕ ದಳ, ನಂತರ 108 ಆಂಬ್ಯುಲೆನ್ಸ್‌ಗಳು ಬಂದ ಬಳಿಕ, ನಾವು ಸಹಾಯ ಮಾಡಲು ಧಾವಿಸಿದೆವು ಎಂದು ಘಟನೆಯ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅಲ್ಲದೆ ಸ್ಥಳದಲ್ಲಿ ಯಾವುದೇ ಸ್ಟ್ರೆಚರ್‌ಗಳು ಕಾಣಿಸದ ಕಾರಣ, ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳಿಗೆ ಸಾಗಿಸಲು ಸೀರೆ ಮತ್ತು ಬೆಡ್‌ಶೀಟ್‌ಗಳನ್ನು ಬಳಸಲಾಯಿತು ಎಂದು ಹೇಳಿದ್ದಾರೆ.
(ಏಜೆನ್ಸೀಸ್)
ಇನ್ನೂ ಈ ಬಗ್ಗೆ ಗುಜರಾತ್ನ ಗೃಹ ಖಾತೆ ಸಚಿವ ಹರ್ಷ ಸಂಘವಿ ಅವರು ಮಾತನಾಡಿದ್ದು, ಬಲಿಪಶುಗಳಿಗೆ ಸೇರಿದ ವಸ್ತುಗಳನ್ನು ಸಂಗ್ರಹಿಸಿ, ದಾಖಲಿಸಲಾಗುತ್ತಿದೆ ಮತ್ತು ಅಪಘಾತದಲ್ಲಿ ಮೃತಪಟ್ಟವರ ಹತ್ತಿರದ ಸಂಬಂಧಿಕರಿಗೆ ಹಿಂತಿರುಗಿಸಲಾಗುವುದು ಎಂದು ಹೇಳಿದ್ದಾರೆ.
ಅಧಿಕಾರಿಗಳು ನಮಗೆ ಸಂಜೆ 9 ಗಂಟೆಯವರೆಗೆ ಸ್ಥಳದಲ್ಲಿ ಕೆಲಸ ಮಾಡಲು ಅನುಮತಿ ನೀಡಿದರು. ಹಾಗಾಗಿ ನಾವು ಏನಾದರೂ ಮಾಡಲು ಸಾಧ್ಯವಾಯಿತು ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಉದ್ಯಮಿ ಹೇಳಿದರು.
ಅಂದಹಾಗೆ, ಅಪಘಾತದಿಂದ ಉಂಟಾದ ವಿನಾಶ, ಬೆಂಕಿ ಮತ್ತು ಘಟನೆಯಿಂದಾದ ನಷ್ಟವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಅವರು ಹೇಳಿದರು.