

ಅಹಮದಾಬಾದ್: ಬುದ್ಧಿಮಾಂದ್ಯ ವ್ಯಕ್ತಿಯೊಬ್ಬ ತನ್ನ ತಂದೆ ಮೃತಪಟ್ಟದ್ದೂ ತಿಳಿಯದೇ ಮೂರು ದಿನ ತಂದೆಯ ಶವದ ಜತೆಯಲ್ಲಿಯೇ ಕಳೆದಿರುವ ಹೃದಯ ವಿದ್ರಾವಕ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ.
ಇಲ್ಲಿಯ ಗುರುಕುಲ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮುಂಬೈಗೆ ಕಾರ್ಯನಿಮಿತ್ತ ತೆರಳಿದ್ದ ಯುವಕನ ತಾಯಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿಕೊಂಡಿದ್ದರು. ಮಗಳು ಅಹಮದಾಬಾದ್‌ನಲ್ಲಿಯೇ ವಾಸವಾಗಿದ್ದರೂ, ಲಾಕ್‌ಡೌನ್ ಕಾರಣದಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಈ ನಡುವೆಯೇ ಇಂಥದ್ದೊಂದು ಘಟನೆ ನಡೆದಿದೆ. ವೃದ್ಧ ತಂದೆ ಮೃತಪಟ್ಟಿರುವುದು ಕೂಡ ತಿಳಿಯದೇ ಮೂರು ದಿನ ಶವದ ಜತೆಗೇ ಮಗ ಕಳೆದಿದ್ದಾರೆ.
ಯಾರೂ ಇದನ್ನು ಗಮನಿಸಿರಲಿಲ್ಲ. ಆದರೆ ಮೂರು ದಿನಗಳಿಂದ ಮನೆಯಿಂದ ಯಾರೊಬ್ಬರು ಹೊರ ಬಾರದ ನಂತರ ಸಂದೇಹ ಪಟ್ಟುಕೊಂಡಿರುವ ನೆರೆಹೊರೆಯವರು ವೃದ್ಧನ ಮಗಳಿಗೆ ಕರೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಮೃತ ವ್ಯಕ್ತಿಗೆ 75 ವರ್ಷವಾಗಿತ್ತು. ಅನೇಕ ವರ್ಷಗಳಿಂದ ಅವರು ಹಾಸಿಗೆಯ ಮೇಲೆಯೇ ಇದ್ದರು. ಅವರನ್ನು ಹಾಗೂ ಬುದ್ಧಿಮಾಂದ್ಯ 40 ವರ್ಷದ ಮಗನನ್ನು ನೋಡಿಕೊಳ್ಳುವ ಜವಾಬ್ದಾರಿ ಮಹಿಳೆಯ ಮೇಲಿತ್ತು. ಲಾಕ್‌ಡೌನ್ ಶುರುವಾಗುವ ಮೊದಲು ಅವರು ಕಾರ್ಯ ನಿಮಿತ್ತ ಮುಂಬೈಗೆ ಹೋಗಿದ್ದರು. ನಂತರ ಬಸ್, ರೈಲುಗಳು ಬಂದ್ ಆದ ಕಾರಣ ಮನೆಗೆ ಬರಲು ಆಗಿರಲಿಲ್ಲ.
ಆದ್ದರಿಂದ ತಂದೆ, ಮಗ ಇಬ್ಬರೇ ಮನೆಯಲ್ಲಿ ಇದ್ದರು. ಮಗಳು ಕೂಡ ತಮ್ಮ ಮನೆಯಲ್ಲಿಯೇ ಇದ್ದರು. ಮೂರು ದಿನಗಳವರೆಗೆ ತಂದೆ, ಮಗನನ್ನು ನೋಡದ ಹಿನ್ನೆಲೆಯಲ್ಲಿ ನೆರೆ ಮನೆಯವರು ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅವರು ಮನೆಗೆ ಬಂದಾಗ ವಿಷಯ ತಿಳಿದಿದೆ. ಸಾಯುವ ಮುನ್ನ ತಮ್ಮ ಮಗಳಿಗೆ ಕರೆ ಮಾಡಲು ಅವರು ಪ್ರಯತ್ನ ಪಟ್ಟಿದ್ದರೂ ಅದು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರೇ ಸಹಾಯ ಮಾಡುವ ಮೂಲಕ ಅಂತ್ಯಕ್ರಿಯೆ ನಡೆದಿದೆ. (ಏಜೆನ್ಸೀಸ್)