ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ; 11 ವರ್ಷಗಳ ನಂತರ ಬೇರ್ಪಟ್ಟ ಅಹಾನ್ ಶೆಟ್ಟಿ- ತಾನಿಯಾ ಶ್ರಾಫ್

shetty 1
Published on

ಮುಂಬೈ: ವರದಿಗಳ ಪ್ರಕಾರ, ಸುನೀಲ್ ಶೆಟ್ಟಿ ಅವರ ಮಗ ಅಹಾನ್ ಶೆಟ್ಟಿ ಮತ್ತು ಅವರ ಗೆಳತಿ ತಾನಿಯಾ ಶ್ರಾಫ್ ಬೇರ್ಪಟ್ಟಿದ್ದಾರೆ. ಈ ಜೋಡಿ ಒಂದೂವರೆ ತಿಂಗಳ ಹಿಂದೆ ಬೇರ್ಪಟ್ಟಿತ್ತು ಎನ್ನಲಾಗಿದೆ. ಅಹಾನ್ ಮತ್ತು ತಾನಿಯಾ ಹನ್ನೊಂದು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಒಂದೇ ಶಾಲೆಯಲ್ಲಿ ಓದುತ್ತಿದ್ದ ಬಾಲ್ಯದ ಸ್ನೇಹಿತರು. ಪಾರ್ಟಿಗಳಲ್ಲಿ ತಾನಿಯಾ ಆಗಾಗ್ಗೆ ಅಹಾನ್ ಜೊತೆ ಕಾಣಿಸಿಕೊಂಡಿದ್ದರು. ಆದರೆ ಬಹಳ ದಿನಗಳಿಂದ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಬ್ರೇಕಪ್ ಸುದ್ದಿ ಹೊರಬರುತ್ತಿದೆ.

ಆಪ್ತ ಸ್ನೇಹಿತರೊಬ್ಬರು ಈ ಬ್ರೇಕಪ್ ಸುದ್ದಿಯನ್ನು ಖಚಿತಪಡಿಸಿದ್ದಾರೆ, 'ಬ್ರೇಕಪ್​​​ನಿಂದ ಹನ್ನೊಂದು ವರ್ಷಗಳ ಸಂಬಂಧ ಅಂತ್ಯವಾಗಿದೆ. ಕಳೆದ ತಿಂಗಳು ಇಬ್ಬರೂ ಬೇರ್ಪಟ್ಟರು. ಪ್ರಸ್ತುತ ಅಹಾನ್ ಏಕಾಂಗಿಯಾಗಿದ್ದು, ಬ್ರೇಕಪ್​​​ಗೆ ಹಿಂದಿನ ಕಾರಣ ತಿಳಿದುಬಂದಿಲ್ಲ'.

ಅಹಾನ್ ಮತ್ತು ತಾನಿಯಾ ಬ್ರೇಕಪ್?
ಕಳೆದ ವರ್ಷ, ಅಹಾನ್ ಮತ್ತು ತಾನಿಯಾ ಮದುವೆಯಾಗುತ್ತಾರೆ ಎಂಬ ಸುದ್ದಿ ಜೋರಾಗಿ ಹರಡಿತ್ತು. ಆ ಸಮಯದಲ್ಲಿ, ಅಹಾನ್ ಸಂದರ್ಶನವೊಂದರಲ್ಲಿ, 'ನಾನು ಎಂದಿಗೂ ಏನನ್ನೂ ಮರೆಮಾಡಲು ಪ್ರಯತ್ನಿಸಲಿಲ್ಲ ಅದರ ಬಗ್ಗೆ ಮಾತನಾಡಿದ್ದೇನೆ. ನನ್ನ ಮದುವೆಯ ವದಂತಿಗಳಿಂದ ನನಗೆ ಯಾವುದೇ ತೊಂದರೆ ಇಲ್ಲ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಯಾವುದೇ ಮದುವೆ ನಡೆಯುತ್ತಿಲ್ಲ. ಇದೀಗ ನನ್ನ ಗಮನ ನನ್ನ ವೃತ್ತಿ ಮತ್ತು ಮುಂದಿನ ಕೆಲವು ಚಿತ್ರಗಳ ತರಬೇತಿಯ ಮೇಲೆ ಕೇಂದ್ರೀಕೃತವಾಗಿದೆ' ಎಂದಿದ್ದರು.

ತಂದೆ ಸುನೀಲ್​​​ ಶೆಟ್ಟಿ ಹೇಳಿದ್ದೇನು?
ಅಹಾನ್ ಮತ್ತು ತಾನಿಯಾ ಇನ್​​​ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಆದರೆ ಕುತೂಹಲಕಾರಿ ಸಂಗತಿಯೆಂದರೆ, ಅಥಿಯಾ ಶೆಟ್ಟಿ ಮದುವೆಯ ನಂತರ ತಾನಿಯಾ ಅವರು ಹಂಚಿಕೊಂಡ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಸುದ್ದಿಗೆ ಅಹಾನ್ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಹಿಂದೆ ಸಂದರ್ಶನವೊಂದರಲ್ಲಿ ಅಹಾನ್ ತಂದೆ ಸುನೀಲ್ ಶೆಟ್ಟಿ ತಾನಿಯಾಳನ್ನು ಅಹಾನ್‌ನ ಮೊದಲ ಪ್ರೀತಿ ಎಂದು ಕರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net