ಕೃಷಿಗೆ ಉತ್ತೇಜನ

edit 4
Published on

ಕರೊನಾ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಿವಿಧ ಜನವರ್ಗಗಳ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಪ್ರಕಟಿಸುತ್ತಿವೆ. ಅದರಲ್ಲೂ, ‘ಸ್ವಾವಲಂಬಿ ಭಾರತ’ ಯೋಜನೆಯಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂ.ಗಳ ಮೊತ್ತದ ಪ್ಯಾಕೇಜ್ ಘೋಷಿಸಿದ್ದು, ಬೇರೆ ಬೇರೆ ವಲಯಕ್ಕೆ ನೀಡಲಾಗುವ ಸವಲತ್ತುಗಳ ಮಾಹಿತಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಂತಹಂತವಾಗಿ ಪ್ರಕಟಿಸುತ್ತಿದ್ದಾರೆ. ಇತ್ತ ರಾಜ್ಯದಲ್ಲೂ ಒಟ್ಟು 2273 ಕೋಟಿ ರೂ. ಮೊತ್ತದ ಮೂರು ಪ್ಯಾಕೇಜ್​ಗಳನ್ನು ಈವರೆಗೆ ಘೋಷಿಸಲಾಗಿದೆ. ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದ ಯೋಜನೆಗಳಲ್ಲಿ ಕೃಷಿಯನ್ನು ಕೇಂದ್ರೀಕರಿಸಲಾಗಿದೆ. ವಿಶೇಷವಾಗಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ. ಒದಗಿಸುವ ಘೋಷಣೆ ಮಹತ್ವವಾದುದು. ಏಕೆಂದರೆ, ನಮ್ಮ ದೇಶದಲ್ಲಿ ಸೂಕ್ತ ಸಾಗಣೆ ವ್ಯವಸ್ಥೆ ಮತ್ತು ಶೈತ್ಯಾಗಾರ, ಇತರ ಸವಲತ್ತು ಇಲ್ಲದೆಯೇ ಹಲವು ಪ್ರಮಾಣದ ಬೆಳೆ ಹಾಳಾಗುತ್ತಿದೆಯಲ್ಲದೆ, ರೈತರಿಗೆ ಅಪಾರ ನಷ್ಟವಾಗುತ್ತಿದೆ. ಕೃಷಿಕರು, ಮೀನುಗಾರರು, ಹೈನುಗಾರರು ಮತ್ತು ಕೃಷಿ ಮೂಲಸೌಕರ್ಯ ವೃದ್ಧಿ, ಕೃಷಿಯಾಧಾರಿತ ಉತ್ಪಾದನೆ ಘಟಕ, ಕೃಷಿಗೆ ಸಂಬಂಧಿಸಿದ ಸಾಗಣೆ, ಗೋದಾಮು, ಶೈತ್ಯಾಗಾರ ಅಭಿವೃದ್ಧಿಗೆ 8 ನೆರವಿನ ಬಗ್ಗೆ ಪ್ರಕಟಿಸಲಾಗಿದೆ. ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಇರಾದೆಯನ್ನು ಕೇಂದ್ರ ಸರ್ಕಾರ ಪದೇಪದೆ ವ್ಯಕ್ತಪಡಿಸುತ್ತಿದ್ದು, ಕರೊನಾ ಕಾರಣದಿಂದಾಗಿ ಇತರ ಎಲ್ಲ ಕ್ಷೇತ್ರಗಳಂತೆ ಕೃಷಿ ರಂಗವೂ ತೊಂದರೆಗೆ ಸಿಲುಕಿದೆ. ಇಂಥ ಸಂದರ್ಭದಲ್ಲಿ ಈ ರೀತಿಯ ಕ್ರಮಗಳು ರೈತರಲ್ಲಿ ವಿಶ್ವಾಸ ತುಂಬಬಲ್ಲವು.

ಕರ್ನಾಟಕದಲ್ಲಿ ಮೆಕ್ಕೆಜೋಳ ರೈತರಿಗೆ ನೆರವು ನೀಡಲು ರಾಜ್ಯ ಸರ್ಕಾರ ನಿರ್ಣಯಿಸಿದೆ. ಮೆಕ್ಕೆಜೋಳಕ್ಕೆ ಕ್ವಿಂಟಾಲ್​ಗೆ 1,760 ರೂ. ಬೆಂಬಲಬೆಲೆ ನಿಗದಿಪಡಿಸಲಾಗಿತ್ತು. ಆದರೂ ಇಷ್ಟು ಬೆಲೆ ಸಿಗದ ಕಾರಣ ಮೆಕ್ಕೆಜೋಳ ಬೆಳೆದಿರುವ 10 ಲಕ್ಷ ರೈತರಿಗೆ ತಲಾ 5,000 ರೂ. ಧನಸಹಾಯ ನೀಡಲಾಗುತ್ತದೆ. ಇನ್ನೊಂದೆಡೆ, ಕರೊನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಾಗಿ ನಿಂತು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರೂ. ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ 4,25,000 ಕಾರ್ಯಕರ್ತೆಯರಿಗೆ 12.50 ಕೋಟಿ ರೂ. ಸಿಗಲಿದೆ. ಅಪಾಯದ ಸನ್ನಿವೇಶದಲ್ಲಿಯೂ ಕರ್ತವ್ಯ ಮರೆಯದೆ ಕೆಲಸ ಮಾಡುವವರಿಗೆ ಇದರಿಂದ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಕರೊನಾ ಕಾರಣದಿಂದಾಗಿ ಸರ್ಕಾರದ ಆದಾಯವೂ ಗಣನೀಯವಾಗಿ ಕುಸಿದಿದ್ದು, ಇನ್ನು ಬೇರೆ ಪ್ಯಾಕೇಜ್ ಇಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಕರೊನಾದಂಥ ಕಷ್ಟಕರ ಸನ್ನಿವೇಶದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಎಲ್ಲ ವಲಯದವರ ನೆರವಿಗೆ ಬರಬೇಕಾದುದು ಮತ್ತು ಜನರಲ್ಲಿ ಆತ್ಮವಿಶ್ವಾಸ ತುಂಬುವುದು ಸರ್ಕಾರಗಳ ಕರ್ತವ್ಯ. ಇಂತಹ ಕ್ರಮಗಳು ಆ ಕೆಲಸ ಮಾಡುತ್ತವೆ ಎಂದು ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net