

ನಾಯಕನಹಟ್ಟಿ: ಖಾಸಗಿ ಕಂಪನಿಯಿಂದ ಕೃಷಿ ಭೂಮಿಯಲ್ಲಿ ಕಬ್ಬಿಣ ಮತ್ತು ಉಕ್ಕಿಗೆ ಸಂಬಂಧಿಸಿದ ಕೈಗಾರಿಕೆ ನಿರ್ಮಾಣಕ್ಕೆ ಪ್ರಬಲ ವಿರೋಧವಿದೆ ಎಂದು ಭೈರನಾಯಕನಹಟ್ಟಿ ಮತ್ತು ಭೀಮಗೊಂಡನಹಳ್ಳಿ ಗ್ರಾಮದ ರೈತರು ಸೋಮವಾರ ಪಟ್ಟಣದ ನಾಡಕಚೇರಿಗೆ ಮನವಿ ಸಲ್ಲಿಸಿದರು.
ಎರಡೂ ಗ್ರಾಮಗಳ 600 ರೈತ ಕುಟುಂಬಗಳು ಕೃಷಿ ಭೂಮಿಯನ್ನು ನಂಬಿ ಜೀವನ ನಡೆಸುತ್ತಿದ್ದೇವೆ. ಇರುವ ಸ್ವಲ್ಪ ಭೂಮಿಯಲ್ಲಿ ಈರುಳ್ಳಿ, ತರಕಾರಿ, ಹೂವು, ದವಸ ಧಾನ್ಯ ಬೆಳೆದು ಹೊಟ್ಟೆ ಹೊರೆಯುತ್ತಿದ್ದೇವೆ.
ಈ ಸಮಯದಲ್ಲಿ ಕೆಲ ರೈತರು ಆಮಿಷಗಳಿಗೆ ಒಳಗಾಗಿ ಖಾಸಗಿ ಕಂಪನಿಗೆ ಜಮೀನು ಮಾರಾಟ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ಈ ಕಂಪನಿ ಕೃಷಿ ಜಮೀನುಗಳ ಪಕ್ಕದಲ್ಲೇ 50 ಎಕರೆ ಪ್ರದೇಶದಲ್ಲಿ ಕಬ್ಬಿಣ ಮತ್ತು ಉಕ್ಕಿಗೆ ಸಂಬಂಧಿಸಿದ ಕಾರ್ಖಾನೆಯನ್ನು ಸ್ಥಾಪಿಸಿಲು ಮುಂದಾಗಿದೆ.
ಇದಕ್ಕೆ ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ರಾಜ್ಯಮಟ್ಟದ ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ತಾತ್ವಿಕ ಒಪ್ಪಿಗೆಯನ್ನು ಪಡೆದುಕೊಂಡಿದ್ದು, ಅವೈಜ್ಞಾನಿಕ ಕ್ರಮವಾಗಿದೆ ಎಂದರು.
ಜೈವಿಕ ಪರಿಸರ ಉತ್ತಮವಾಗಿರುವ ಹಸಿರು ವಲಯದಲ್ಲಿ ಕೈಗಾರಿಕೆ ನಿರ್ಮಾಣ ಮಾಡಬಾರದು ಎಂಬ ನಿಯಮಗಳಿವೆ.
ಆದರೂ ಕೆಲ ಅಧಿಕಾರಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ರೈತರು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಬೃಹತ್ ಯೋಜನೆ
ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಜಿ.ಹನುಮಂತಪ್ಪ, ಕೆ.ಜಿ.ತಿಪ್ಪೇಸ್ವಾಮಿ, ಜಿ.ಎಸ್.ರಂಗಸ್ವಾಮಿ ಆರೋಪಿಸಿದರು.
ಕೃಷಿ ಭೂಮಿ, ಮತ್ತು ಜನವಸತಿ ಪ್ರದೇಶದ ಅನತಿದೂರದಲ್ಲಿ ಕಾರ್ಖಾನೆ ನಿರ್ಮಾಣ ಮಾಡುವುದು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ.
ಉದ್ದೇಶಿತ ಕೈಗಾರಿಕೆ ನಿರ್ಮಾಣದ ಪಕ್ಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಕೃಷಿ ಭೂಮಿಗಳಿವೆ.
ಉದ್ದೇಶಿತ ಕೈಗಾರಿಕೆಯು ಜನವಸತಿ ಪ್ರದೇಶದಿಂದ ಕೇವಲ 320 ಮತ್ತು 280 ಮೀ. ದೂರದಲ್ಲಿರುವುದರಿಂದ ಕೈಗಾರಿಕೆ ಸ್ಥಾಪನೆಯಾದರೆ ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯದ ಜತೆಗೆ ಅಂತರ್ಜಲದ ಮಟ್ಟ ಕುಸಿಯುತ್ತದೆ ಎಂದರು.
ರೈತರ ಒಪ್ಪಿಗೆ ಇಲ್ಲದೆ ಕೈಗಾರಿಕೆ ನಿರ್ಮಾಣಕ್ಕೆ ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಚಿತ್ರಲಿಂಗಪ್ಪ, ಕಿಲಾರಿ ಬಸಯ್ಯ, ಟಿ.ಚಂದ್ರಪ್ಪ, ನಾಗರಾಜ, ದೇವರಾಜ, ಗಂಗಪ್ಪ ಮುಂತಾದವರು ಎಚ್ಚರಿಸಿದರು.
ಮನವಿಪತ್ರ ಸ್ವೀಕರಿಸಿದ ಉಪತಹಸೀಲ್ದಾರ್ ಬಿ.ಶಕುಂತಲಾ, ನಿಮ್ಮ ಮನವಿಯನ್ನು ತಹಸೀಲ್ದಾರ್ ಕಚೇರಿಗೆ ರವಾನಿಸಲಾಗುವುದು ಎಂದರು.
ಜಿ.ಬಸವರಾಜ, ರಂಗಪ್ಪ, ಪಾಪಯ್ಯ, ಬೋರಯ್ಯ, ಕೆ.ಪಿ.ಮಂಜುನಾಥ, ಎಂ.ಓಬಯ್ಯ, ಜಿ.ಡಿ.ಆರ್.ತಿಪ್ಪೇಸ್ವಾಮಿ, ಅಜಯ್, ರವಿ ಇದ್ದರು.