ಕರೊನಾ ನಡುವೆಯೂ ಕೃಷಿ ಖುಷಿ ನಿರೀಕ್ಷೆಗಿಂತ ಅಧಿಕ ಬಿತ್ತನೆ

Agri
Published on

ಸತೀಶ್ ಕೆ.ಬಳ್ಳಾರಿ

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿರುವ ಜನತೆಗೆ ಕರೊನಾ ಕಾರಣಕ್ಕೆ ಸಾಕಷ್ಟು ಜನ ಹಳ್ಳಿಗಳಿಗೆ ಹಿಂತಿರುಗಿರುವುದರಿಂದ,ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಬಿತ್ತನೆ ಕಾರ್ಯ ನಡೆದಿದೆ. ಕೃಷಿ ಇಲಾಖೆ ಈ ಸಾಲಿನಲ್ಲಿ 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಅದರಲ್ಲಿ ಈಗಾಗಲೇ ಶೇಕಡಾ 64 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಕಳೆದ ಒಂದು ತಿಂಗಳಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಒಟ್ಟಾರೆ ಮುಂಗಾರು ಅವಧಿಯಲ್ಲಿ ನಿಗದಿತ ಗುರಿಗಿಂತ ಹೆಚ್ಚು ಬಿತ್ತನೆಯಾಗುವ ನಿರೀಕ್ಷೆ ಇದೆ.

ಕರೊನಾ ಕಾರಣ?: ಕರೊನಾ ಕಾರಣಕ್ಕಾಗಿ ಜಾರಿಗೊಂಡ ಲಾಕ್ ಡೌನ್​ನಿಂದ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದು, ನಗರಗಳನ್ನು ತೊರೆದಿದ್ದಾರೆ. ಅಲ್ಲದೆ ಸಾಕಷ್ಟು ವಲಸೆ ಕಾರ್ವಿುಕರೂ ಹಳ್ಳಿ ಸೇರಿದ್ದು, ಇಷ್ಟು ವರ್ಷ ಪಾಳು ಬಿದ್ದಿದ್ದ ಭೂಮಿಗಳಲ್ಲೂ ಕೃಷಿ ಚಟುವಟಿಕೆ ನಡೆಯುತ್ತಿದೆ. ಜತೆಗೆ ಕಾಲಕಾಲಕ್ಕೆ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಭರದಿಂದ ಸಾಗಿವೆ. ಅಲ್ಲದೆ ನೀಲಗಿರಿ, ಅಕೇಶಿಯಾ ಮರಗಳನ್ನು ಕಟಾವು ಮಾಡಿ ಇತರೆ ಸಾಮಾನ್ಯ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಮಾವು, ತೆಂಗು, ಅಡಿಕೆ ಸಪೋಟ ಸೇರಿ ಹಣ್ಣು ಮತ್ತು ಇತರೆ ತೋಟಗಾರಿಕೆ ಬೆಳೆಗಳಲ್ಲಿ ಮಿಶ್ರ ಮತ್ತು ಅಂತರ ಬೇಸಾಯ ಆರಂಭಿಸಿದ್ದು, ಬಿತ್ತನೆ ಪ್ರದೇಶ ಹೆಚ್ಚಳವಾಗುವ ಸಾಧ್ಯತೆ ಇದೆ.

ಪ್ರತಿ ವರ್ಷ ವಾಡಿಕೆಯಂತೆ ಜುಲೈ ಅಂತ್ಯಕ್ಕೆ ಶೇ.60 ಅಂದರೆ ಒಟ್ಟು 45.5 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಬೇಕು. ಆದರೆ, ಈ ವರ್ಷ ಶೇ.64 ಅಂದರೆ 47.01 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮುಂದಿನ 2 ತಿಂಗಳು ಮಳೆ ಹೀಗೆಯೇ ಉತ್ತಮವಾಗಿ ಸುರಿದರೆ ಉಳಿದ ಶೇ.36 ಭೂಮಿ ಜತೆಗೆ ಹೆಚ್ಚಿನ ಪ್ರದೇಶ ಬಿತ್ತನೆಯಾಗಲಿದೆ. ಆದರೆ ಒಟ್ಟಾರೆ ಅಂಕಿ ಅಂಶ ಆಧಾರಿತವಾಗಿ ಸೆಪ್ಟೆಂಬರ್ ಅಂತ್ಯಕ್ಕೆ ಮಾಹಿತಿ ಲಭ್ಯವಾಗಲಿದೆ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.

ಮಾಹಿತಿ ಪಡೆಯುತ್ತಿರುವ ಯುವಪಡೆ: ರಾಜ್ಯದ ಕರಾವಳಿ ಪ್ರದೇಶವಾದ ದಕ್ಷಿಣ ಕನ್ನಡ ಮತ್ತು ನೀರಾವರಿ ಪ್ರದೇಶಗಳಲ್ಲಿ ಯುವಜನರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪಾಳು ಭೂಮಿ, ತೋಟದಲ್ಲಿ ಮಿಶ್ರ ಬೇಸಾಯ ಸೇರಿ ವಿವಿಧ ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಕೆಗೆ ಮುಂದಾಗಿದ್ದಾರೆ. ಅನೇಕ ಯುವಕರು ಮೊಬೈಲ್ ಮತ್ತು ಟಿವಿಗಳ ಮಾಹಿತಿ ಆಧರಿಸಿ ತಜ್ಞರ ಮಾಹಿತಿಯೊಂದಿಗೆ ಸುಧಾರಿತ ಕೃಷಿ ಕಾರ್ಯದಲ್ಲಿ ತೊಡಗಿರುವುದು ಕೃಷಿ ಕ್ಷೇತ್ರ ಅಭಿವೃದ್ಧಿ ಸೂಚಕವಾಗಿದೆ.

ರಾಜ್ಯದಲ್ಲಿ 73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಪಾಳು ಭೂಮಿ ಮತ್ತು ಇತರೆ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಹೆಚ್ಚಾಗಿದೆ. ಕೋವಿಡ್​ನಿಂದಾಗಿ ಹಳ್ಳಿಗಳಿಗೆ ಹೋದವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಬಿತ್ತನೆ ಪ್ರದೇಶ ಹೆಚ್ಚಳವಾಗುವ ಆಶಾಭಾವವಿದೆ. | ಬಿ.ವೈ.ಶ್ರೀನಿವಾಸ್ ಕೃಷಿ ಇಲಾಖೆ ನಿರ್ದೇಶಕರುhttps://www.vijayavani.net/woman-in-mps-betul-plotted-murder-of-judge-and-family-arrested-with-5-others/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net