

ಕುಶಾಲನಗರ: ಇಲ್ಲಿನ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ಪ್ರಗತಿಪರ ಕೃಷಿಕ ಎಚ್.ಎಸ್.ಮಹೇಶ್ ಅವರ ತೋಟದಲ್ಲಿ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೃಷಿ ಕ್ಷೇತ್ರೋತ್ಸವ ಶುಕ್ರವಾರ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ವೀರೇಂದ್ರಕುಮಾರ್ ಈ ಸಂದರ್ಭ ನೆರೆದಿದ್ದ ಕೃಷಿಕರಿಗೆ ಮಾಹಿತಿ ನೀಡಿ, ೨೦೧೩ ರಲ್ಲಿ ಪೆಪ್ಪರ್‌ಗೆ ದೊರೆತ ಅತ್ಯಧಿಕ ದರಕ್ಕೆ ಮಾರು ಹೋದ ಬಹಳಷ್ಟು ಮಂದಿ ಕೃಷಿಕರು ಪೆಪ್ಪರ್ ಬೆಳೆಯತ್ತ ಮಾರುಹೋದರು. ಆದರೆ, ಪೆಪ್ಪರ್ ಬೆಳೆಯನ್ನು ಬೆಳೆಯುವ ವಿಧಾನಗಳನ್ನು ಅರಿಯದಾದ ಬಹಳಷ್ಟು ಮಂದಿ ಬೆಳೆಗಾರರು, ಪೆಪ್ಪರ್‌ಗೆ ಬಾಧಿಸುವ ರೋಗಗಳನ್ನು ಹತೋಟಿ ಮಾಡಲಾಗದೇ ಬೆಳೆಯಿಂದ ವಿಮುಕ್ತರಾದರು. ಆದರೆ, ಕುಶಾಲನಗರ ತಾಲೂಕಿನಲ್ಲಿ ಪೆಪ್ಪರ್ ಬೆಳೆಗೆ ಸೂಕ್ತವಾದ ವಾತಾವರಣ ವಿದ್ದು ಬೆಳೆಗಾರರು ಮಿಶ್ರ ಮಾದರಿಯ ಪೆಪ್ಪರ್ ಗಿಡಗಳನ್ನು ತಂದು ಬೆಳೆಸಬೇಕಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ೨೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪೆಪ್ಪರ್ ಬೆಳೆ ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಶೇ.೮೦ ಭಾಗ ಪಣೀರ್ ೧ ತಳಿಯದ್ದಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಹೊಸದಾಗಿ ಪೆಪ್ಪರ್ ಬೆಳೆಯತ್ತ ಆಸಕ್ತಿ ತೋರುವ ಕೃಷಿಕರು ತೇವಂ, ಶಕ್ತಿ, ಗಿರಿಮಂಡ ಸೇರಿದಂತೆ ಪಣೀರ್ ೧ ರಿಂದ ೯ ರವರೆಗಿನ ಹಲವು ತಳಿಯ ಗಿಡಗಳನ್ನು ಮಿಶ್ರವಾಗಿ ಪ್ರತೀ ವರ್ಷ ನಾಡಿ ಮಾಡಬೇಕು. ಕಟಾವಿಗೆ ೧೫ ದಿನ ಮುನ್ನಾ ಹಾಗೂ ಕಟಾವಿನ ಬಳಿಕ ೧೫ಗಳ ವರೆಗೆ ಪೆಪ್ಪರ್ ಗಿಡಗಳಿಗೆ ನೀರು ಕಟ್ಟದಂತೆ ವಿಜ್ಞಾನಿಗಳು ಕರೆಕೊಟ್ಟರು. ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ದೇವರಾಜು, ಕೃಷಿ ವಿಸ್ತರಣಾ ಘಟಕದ ಸಹಪ್ರಾಧ್ಯಾಪಕ ಡಾ.ಬಸವಲಿಂಗಯ್ಯ ರೈತರಿಗೆ ಮಾಹಿತಿ ನೀಡಿದರು.
ಮರೂರಿನ ಪ್ರಗತಿಪರ ಕೃಷಿಕ ಎಚ್.ಎಸ್.ಮಹೇಶ್ ಅವರು ತಮ್ಮ ನಾಲ್ಕು ಎಕರೆ ಬರಡು ಭೂಮಿಗೆ ನೀರು ಹರಿಸಿ ನಿರಂತರ ಶ್ರಮದಿಂದಾಗಿ ಹತ್ತಾರು ಮಾದರಿಯ ಸಮಗ್ರ ಕೃಷಿಗಳನ್ನು ಕೈಗೊಳ್ಳುವ ಮೂಲಕ ಸುತ್ತಮುತ್ತಲಿನ ಕೃಷಿಕರಿಗೆ ಮಾದರಿಯಾಗಿದ್ದಾರೆ ಎಂದು ಕೃಷಿ ವಿಜ್ಞಾನಿ ವೀರೇಂದ್ರಕುಮಾರ್ ಇದೇ ಸಂದರ್ಭ ಶ್ಲಾಘಿಸಿದರು.
ಮರೂರು ಗ್ರಾಮದ ಪ್ರಗತಿಪರ ಕೃಷಿಕ ಶತಾಯುಷಿ ಎಚ್.ಎಸ್.ಶಿವರುದ್ರಪ್ಪ, ಹೆಬ್ಬಾಲೆಯ ಕೃಷಿಕರಾದ ಎಚ್.ಎಚ್.ರಾಜಶೇಖರ್, ಶೇಷಪ್ಪ, ಮಣಜೂರು ಗ್ರಾಮದ ಗುರುಲಿಂಗಪ್ಪ, ಎಸ್.ಕೆ.ಗಿರೀಶ್, ಎಚ್.ಎಸ್.ಶಿವಣ್ಣ, ಪ್ರಸನ್ನ, ಆನಂದ್, ಭಿಕ್ಷೇಶ್, ಎಚ್.ಎಸ್.ರಾಜಶೇಖರ್, ಶಿಕ್ಷಕಿಯೂ ಆದ ರೈತ ಮಹಿಳೆ ಎಚ್.ಎಸ್.ಸುನೀತಾ ಮಹೇಶ್, ಮಹದೇವಿ, ಕೆ.ಸಿ.ನಂಜುಂಡಸ್ವಾಮಿ, ಎಚ್.ಎಂ.ಬಸವಣ್ಣ, ಹುಲುಸೆ ಕಪನಪ್ಪ, ಮಹೇಶ್, ಬಸವರಾಜು ಮೊದಲಾದವರಿದ್ದರು. ಇದೇ ಸಂದರ್ಭ ಕೃಷಿ ವಿಜ್ಞಾನಿಗಳು ಹಾಗೂ ರೈತರೊಡಗೂಡಿ ತೋಟದಲ್ಲಿ ಕೃಷಿಕ ಮಹೇಶ್ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಿದ್ದರು.