

ಶಿವಮೊಗ್ಗ: ದೇಶದಲ್ಲಿ ಕೃಷಿ ಆಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಹೆಚ್ಚೆಚ್ಚು ತಂತ್ರಜ್ಞಾನ ಬಳಕೆ ಮಾಡಿಕೊಂಡು ನಿರಂತರ ಸಂಶೋಧನೆ ಮೂಲಕ ಸಮಗ್ರ ಕೃಷಿ ಪದ್ಧತಿ ಮೈಗೂಡಿಸಿಕೊಳ್ಳಬೇಕು. ಎಂಎಸ್‌ಪಿ(ಕನಿಷ್ಠ ಬೆಂಬಲ ಬೆಲೆ) ವೈಜ್ಞಾನಿಕವಾಗಿದ್ದರೆ ಮಾತ್ರ ಕೃಷಿ ವಲಯ ಏಳಿಗೆ ಕಾಣಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅಭಿಪ್ರಾಯಪಟ್ಟರು.
ನಗರದ ನವುಲೆ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಕೃಷಿ-ತೋಟಗಾರಿಕೆ ಮೇಳ ಸಮಾರೋಪದಲ್ಲಿ ಸಹ್ಯಾದ್ರಿ ಟ್ರೈಕೋ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡಿದರು.
ಭಾರತ ಕೃಷಿ ಆಧಾರಿತ ದೇಶ. ದೇಶ ವಿಭಜನೆ ಸಮಯದಲ್ಲಿ ಶೇ.80ರಷ್ಟು ಕೃಷಿ ಆಧಾರಿತವಾಗಿತ್ತು. ಜಾಗತೀಕರಣದ ಬಳಿಕ ಅದು ಶೇ.60ಕ್ಕೆ ಇಳಿಕೆಯಾಗಿದೆ. ಜಾಗತೀಕರಣದ ಬಳಿಕ ಬದಲಾವಣೆಗೆ ಅನುಗುಣವಾಗಿ ಸರ್ಕಾರ ಕೃಷಿ ವಲಯವನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. 2014ರ ಬಳಿಕ ದೇಶದಲ್ಲಿ ಕೃಷಿ ಚಿತ್ರಣ ಸಂಪೂರ್ಣ ಬದಲಾಯಿತು ಎಂದು ಹೇಳಿದರು.
ರೈತ ನಾಯಕ ಕೆ.ಟಿ.ಗಂಗಾಧರ ಮಾತನಾಡಿ, ಕೃಷಿ ಉದ್ಯಮ ಇಂದು ಅತಂತ್ರವಾಗಿದೆ. ಜೀವನೋಪಾಯಕ್ಕಾಗಿ ಯುವಕರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ನಮ್ಮಲ್ಲೇ ಎಲ್ಲ ಸಂಪನ್ಮೂಲಗಳಿವೆ. ಆದರೆ ಬೆಲೆ ನಿಯಂತ್ರಣ ರೈತನ ಕೈಯಲ್ಲಿಲ್ಲ. ಇದು ಕೃಷಿ ಕ್ಷೇತ್ರಕ್ಕೆ ಬಹಳ ದೊಡ್ಡ ಗಂಡಾಂತರ ಎಂದು ಕಳವಳ ವ್ಯಕ್ತಪಡಿಸಿದರು.
ಶಿವಮೊಗ್ಗ ಕೃಷಿ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಬಾಗಲಕೋಟ ತೋಟಗಾರಿಕೆ ವಿವಿ ಕುಲಪತಿ ಡಾ. ವಿಷ್ಣುವರ್ಧನ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಸಚಿವ ಡಾ. ಕೆ.ಸಿ.ಶಶಿಧರ, ಡೀನ್ ಡಾ. ಎನ್.ಎಸ್.ಮಾವರ್ಕರ್, ಆಡಳಿತಾಧಿಕಾರಿ ಡಾ. ಬಿ.ಸಿ.ಧನಂಜಯ, ಮೇಳದ ಉಪಾಧ್ಯಕ್ಷ ಡಾ. ದುಷ್ಯಂತ್‌ಕುಮಾರ್, ಡಾ. ಎಂ.ಆರ್.ಮುರಳೀಧರ್ ಮತ್ತಿತರರಿದ್ದರು.