ಕೃಷಿ ಯಂತ್ರಧಾರೆಗೆ ಸಾರಥಿಗಳ ಕೊರತೆ, ನಿಂತಲ್ಲೆ ನಿಂತು ಕೆಟ್ಟ ಟ್ರ್ಯಾಕ್ಟರ್ಗಳು

Kanakgiri Krushi Yantradhare
ಸೋಮಸಾಗರದಲ್ಲಿನ ಯಂತ್ರಧಾರೆಯಲ್ಲಿ ಉಪಯೋಗವಿಲ್ಲದಿರುವ ಯಂತ್ರೋಪಕರಣಗಳು. ಕೃಷಿ ಯಂತ್ರಧಾರೆಯಲ್ಲಿ ಕೆಟ್ಟು ನಿಂತಿರುವ ಟ್ರ್ಯಾಕ್ಟರ್ ಗಳು.
Published on

ಕನಕಗಿರಿ: ಆಧುನಿಕ ಪದ್ಧತಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಬೇಕಾದ ಯಂತ್ರೋಪಕರಣಗಳನ್ನು ಖರೀದಿಸಲಾಗದ ಸಣ್ಣ, ಮಧ್ಯಮ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಕೃಷಿ ಯಂತ್ರಧಾರೆ, ಕೃಷಿ ಯಾಂತ್ರೀಕರಣ ಘಟಕಗಳ ವಾಹನಗಳಿಗೆ ಕಾಯಂ ಚಾಲಕರೇ ಇಲ್ಲದಿರುವುದು ಸಮಸ್ಯೆಯಾಗಿದೆ.

ತಾಲೂಕಿನ ಮೂರು ಹೋಬಳಿಗಳ ಪೈಕಿ ಕನಕಗಿರಿ ಹೋಬಳಿಗೆ ಮಂಜೂರಾದ ಕೃಷಿ ಯಾಂತ್ರೀಕರಣ ಘಟಕವನ್ನು ಮುಸಲಾಪುರದ ಕೃಷಿ ಋಷಿ ರೈತ ಉತ್ಪಾದಕರ ಕೇಂದ್ರಕ್ಕೆ ನೀಡಿದ್ದರೆ, ನವಲಿ ಹೋಬಳಿಯಲ್ಲಿ ಚಿತ್ರದುರ್ಗ ಮೂಲದ ವರ್ಷ ಏಜೆನ್ಸಿ ಕೃಷಿ ಯಂತ್ರಧಾರೆಯ ನಿರ್ವಹಣೆ ಹೊಣೆ ಹೊತ್ತಿದೆ.

ಇನ್ನು ಹುಲಿಹೈದರ ಹೋಬಳಿ ವ್ಯಾಪ್ತಿಯಲ್ಲಿ ಸೋಮಸಾಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ರೈತರಿಗೆ ಯಂತ್ರೋಪಕರಣಗಳನ್ನು ಒದಗಿಸುವ ಹೊಣೆಯನ್ನು ಪಡೆದುಕೊಂಡಿದೆ.

ಕನಕಗಿರಿ ಹಾಗೂ ಹುಲಿಹೈದರ ಹೋಬಳಿಗಳು ಬಹುತೇಕ ಒಣ ಬೇಸಾಯ ಪ್ರದೇಶವಾಗಿದ್ದು, ಸೋಮಸಾಗರದಲ್ಲಿ ನಡೆಯುತ್ತಿರುವ ಕೃಷಿ ಯಂತ್ರಧಾರೆಯಲ್ಲಿ ಈ ಭಾಗಕ್ಕೆ ಬೇಕಾದ ಎಲ್ಲ ಕೃಷಿ ಉಪಕರಣಗಳ ಜತೆಗೆ ನೀರಾವರಿ ಭಾಗಕ್ಕೆ ಬೇಕಾದ ಯಂತ್ರಗಳನ್ನು ಒಳಗೊಂಡಿವೆ.

ಭತ್ತ ನಾಟಿ, ಭತ್ತ ಕಟಾವು ಯಂತ್ರಗಳು, ರೂಟರ್‌ಗಳು ಬಹುತೇಕ ನೀರಾವರಿ ಭಾಗಕ್ಕೆ ಅನುಕೂಲವಾಗಿವೆ. ಅವುಗಳು ಅಲ್ಲಿಗೆ ತೆರಳಿ ಕೆಲಸ ನಿರ್ವಹಿಸಬೇಕಿದೆ. ಇನ್ನು ಈ ಭಾಗದಲ್ಲಿ ನಡೆಸಲು ಬಳಸುವ ಯಂತ್ರಗಳಿಗೆ ಕಾಯಂ ಚಾಲಕರೇ ಇಲ್ಲವಾಗಿದ್ದು, ರೈತರು ಮುಂಚಿತವಾಗಿ ಬುಕ್ಕಿಂಗ್ ಮಾಡಿದರೆ, ಜವಾಬ್ದಾರಿ ಹೊತ್ತ ಫ್ರಾಂಚೈಸಿಯವರು ಚಾಲಕರನ್ನು ಹುಡುಕಬೇಕಾದ ಅನಿವಾರ್ಯತೆ ಇದೆ. ಇದರಿಂದ ಯಂತ್ರೋಪಕರಣಗಳು ಸೂಕ್ತ ರೀತಿಯಲ್ಲಿ ಬಳಕೆಯಾಗದಂತಾಗಿವೆ.

ಗ್ರಾಮೀಣ ಭಾಗದಲ್ಲಿ ಚಾಲನಾ ಪರವಾನಗಿ ಹೊಂದಿರುವವರ ಸಂಖ್ಯೆ ಕಡಿಮೆಯಿದ್ದು, ಪರವಾನಗಿ ಇದ್ದವರನ್ನು ಹುಡುಕುವುದು ಕಷ್ಟದ ಕೆಲಸವಾಗಿದೆ. ಇಲ್ಲಿ ದುರಸ್ತಿಗೀಡಾದ ಟ್ರ್ಯಾಕ್ಟರ್ ಗಳು, ಉಪಕರಣಗಳು ಬಹಳಷ್ಟಿವೆ. ಇಲ್ಲಿ ಬಳಕೆಯಾಗದ ಯಂತ್ರಗಳನ್ನು ಸರ್ಕಾರ ವಿಲೇವಾರಿ ಮಾಡಬೇಕಾಗಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಇನ್ನು ಕನಕಗಿರಿ ಹೋಬಳಿ ವ್ಯಾಪ್ತಿಯ ಮುಸಲಾಪುರದಲ್ಲಿ ನಡೆಯುತ್ತಿರುವ ಕೃಷಿ ಋಷಿ ರೈತ ಉತ್ಪಾದಕರ ಕೇಂದ್ರವು ಇಲಾಖೆಯಿಂದ ಸಬ್ಸಿಡಿಯಲ್ಲಿ ಟ್ರಾೃಕ್ಟರ್ ಅನ್ನು ಖರೀದಿಸಿದ್ದು, ಆ ಯಂತ್ರಕ್ಕೂ ಕಾಯಂ ಡ್ರೈವರ್‌ಗಳಿಲ್ಲದೆ, ತಾತ್ಕಾಲಿಕ ಚಾಲಕನಿಂದಲೇ ಕೆಲಸ ಮಾಡಿಸಲಾಗುತ್ತಿದೆ ಎನ್ನುತ್ತಾರೆ ಸಿಬ್ಬಂದಿ.

ನವಲಿ ಹೋಬಳಿಯಲ್ಲಿ ವರ್ಷ ಏಜೆನ್ಸಿ ಯಂತ್ರಧಾರೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರಿಂದ ಈ ಕಂಪನಿಯ ಬಗ್ಗೆ ಮೇಲಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಸ್ಥಳೀಯ ಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳೀಯರ ಯಂತ್ರಕ್ಕೆ ಬೇಡಿಕೆ

ಸರ್ಕಾರವೇನೋ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಯಂತ್ರಧಾರೆ ಯೋಜನೆ ತಂದಿದೆ. ಆದರೆ, ಕಾಯಂ ಚಾಲಕರಿಲ್ಲದಿರುವುದು, ಯಂತ್ರ ದುರಾವಸ್ಥೆ ಸೇರಿ ವಿವಿಧ ಕಾರಣಗಳಿಗಾಗಿ ರೈತರು ಸ್ಥಳೀಯವಾಗಿರುವ ಯಂತ್ರಗಳ ಬಳಕೆಗೆ ಮುಂದಾಗುತ್ತಿದ್ದಾರೆ.

ಇನ್ನು ಮಾರುಕಟ್ಟೆ ದರಕ್ಕಿಂತ ಯಂತ್ರಧಾರೆಯಲ್ಲಿ 50ರಿಂದ 100 ರೂ.ಬಾಡಿಗೆ ಕಡಿಮೆಯಿದ್ದರೂ ಬಾಡಿಗೆ ಹಣವನ್ನು ಆಗಲೇ ಪಾವತಿಸಬೇಕಿದ್ದರಿಂದ ರೈತರು ಹಣಕ್ಕಾಗಿ ಕೆಲ ದಿನಗಳವರೆಗೆ ತಡೆಯುವ ಸ್ಥಳೀಯರದ್ದೇ ಯಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ರೈತರು ಕೃಷಿ ಯಂತ್ರಗಳ ಖರೀದಿಗೆ ಮುಂದಾಗುತ್ತಿದ್ದು, ಯಂತ್ರಧಾರೆಯನ್ನು ಅಷ್ಟಾಗಿ ನೆಚ್ಚಿಕೊಂಡಿಲ್ಲ.

ಬಿತ್ತನೆ ಸಂದರ್ಭದಲ್ಲಿ ಚಾಲಕರ ಕೊರತೆ

ಯಂತ್ರಧಾರೆಯಲ್ಲಿ ಕೇವಲ ರೈತರು ಬುಕ್ಕಿಂಗ್ ಮಾಡಿದಾಗ ಮಾತ್ರ ಚಾಲಕರನ್ನು ಕರೆಯುವ ಫ್ರಾಂಚೈಸಿಯವರು ಉಳಿದ ದಿನಗಳಲ್ಲಿ ಅವರಿಗೆ ಕೆಲಸ ನೀಡುವುದಿಲ್ಲ. ಇದರಿಂದ ಬಿತ್ತನೆ ಸಂದರ್ಭದಲ್ಲಿ ಚಾಲಕರು ದಿನನಿತ್ಯ ತೆರಳುವ ವಾಹನಗಳಿಗೆ ತೆರಳುವುದರಿಂದ ಯಂತ್ರಧಾರೆ ಇದ್ದರೂ ಇಲ್ಲದಂತಾಗುತ್ತಿವೆ ಎನ್ನುವುದು ಸ್ಥಳೀಯ ರೈತರ ಆರೋಪ.

ಚಾಲಕರ ಕೊರತೆ, ಯಂತ್ರಗಳ ನಿರ್ವಹಣೆ ಸಮಸ್ಯೆ ಎಲ್ಲ ಕಡೆಗಳಿಂದಲೂ ಕೇಳಿಬರುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳಿಗೂ ತಿಳಿದಿದ್ದು, ಸಿಇಒ ನೇತೃತ್ವದಲ್ಲಿ ಸಭೆ ನಡೆದಿದೆ. ಮತ್ತೊಮ್ಮೆ ಸಭೆ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ನವಲಿಯ ಫ್ರಾಂಚೈಸಿ ರೈತರಿಗೆ ಸೌಕರ್ಯ ಒದಗಿಸದಿದ್ದರಿಂದ ಕ್ರಮಕ್ಕಾಗಿ ಕಳೆದ ವರ್ಷವೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.| ಸಂತೋಷ ಪಟ್ಟದಕಲ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಗಂಗಾವತಿ ಯಂತ್ರಧಾರೆಯಲ್ಲಿ ಹಲವು ಯಂತ್ರಗಳು ದುರಸ್ತಿಯಾಗಿ ನಿಂತಿದ್ದು, ಚಾಲಕರು ಇಲ್ಲದೇ 70-80 ಲಕ್ಷ ರೂ. ವೆಚ್ಚದ ಸಾಮಗ್ರಿಗಳು ಉಪಯೋಗವಿಲ್ಲದೆ ತುಕ್ಕು ಹಿಡಿಯುತ್ತಿವೆ. ಇದರಿಂದ ಖಾಸಗಿಯವರ ಯಂತ್ರಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ.| ಪಂಪಾಪತಿ ತರ‌್ಲಕಟ್ಟಿ, ಸೋಮಸಾಗರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net