ಸೋಮವಾರಪೇಟೆ: ತಾಲೂಕಿನ ಗ್ರಾಮೀಣ ಭಾಗದ ಕೆಲ ರೈತರ ಪೈಸಾರಿ ಕೃಷಿ ಭೂಮಿಯ ಮುಟೇಷನ್ ಕಾಪಿ(ಎಂ.ಸಿ.)ಯಲ್ಲಿ ಸಿ ಆ್ಯಂಡ್ ಡಿ ಎಂದು ದಾಖಲಾಗುತ್ತಿತ್ತು ಕೃಷಿಕರು ಆತಂಕಗೊಂಡಿದ್ದಾರೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಆತಂಕ ವ್ಯಕ್ತಪಡಿಸಿದರು.
ಮುಟೇಷನ್ ಕಾಪಿಯಲ್ಲಿ ಪೈಸಾರಿ ಜಾಗ, ಸಿ ಆ್ಯಂಡ್ ಡಿ ಎಂದು ಪರಿವರ್ತನೆಯಾದರೆ, ಕೃಷಿಕರು ಯಾವುದೇ ಭೂಮಿ ದಾಖಲಾತಿಯನ್ನು ಪಡೆಯಲು ಸಾಧ್ಯವಿಲ್ಲ. ಇದರಿಂದ ಕೃಷಿಕರು ಆತಂಕಗೊಂಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೋಮವಾರಪೇಟೆ ತಾಲೂಕಿನ ನೇಗಳ್ಳೆ ಗ್ರಾಮದ ಸರ್ವೇ ನಂ.235, 225/2 ರಲ್ಲಿ 110 ಜಾಗವನ್ನು ಸಿ ಆ್ಯಂಡ್ ಡಿ ಎಂದು ಅರಣ್ಯ ಇಲಾಖೆಯವರು ಮೇಲಾಧಿಕಾರಿಗಳಿಗೆ ವರದಿ ನೀಡಿರುವ ಬಗ್ಗೆ ಮಾಹಿತಿ ಇದ್ದು, ಕೃಷಿಕರಿಗೆ ಯಾವುದೇ ಮಾಹಿತಿ ನೀಡದೆ, ಕೃಷಿಕರ ಅಹವಾಲು ಸ್ವೀಕರಿಸದೆ, ಏಕಾಏಕಿ ಸಿ ಆ್ಯಂಡ್ ಡಿ ಭೂಮಿ ಎಂದು ಗುರುತು ಮಾಡಿರುವುದು ನಿಯಮಬಾಹಿರ ಎಂದು ಹೇಳಿದರು.
ಪೈಸಾರಿ ಜಾಗವನ್ನು ಮೀಸಲು ಅರಣ್ಯ ಎಂದು ಘೋಷಣೆ ಮಾಡಲು ಸೆಕ್ಷನ್-4 ರಿಂದ ಸೆಕ್ಷನ್-17ರ ತನಕ ಕಾಯ್ದೆ ಕ್ರಮಗಳಿವೆ. ನಿಯಮ ಮೀರಿ ಅರಣ್ಯ ಇಲಾಖೆ ಕೃಷಿಕರಿಗೆ ತೊಂದರೆ ಕೊಡಬಾರದು ಎಂದು ಮನವಿ ಮಾಡಿದರು. ಕೃಷಿ ಭೂಮಿಯನ್ನು ಮೀಸಲು ಅರಣ್ಯ ಮಾಡಿಕೊಂಡರೆ, ಮನುಷ್ಯ ತಿನ್ನಬೇಕಾದ ಆಹಾರ ಬೆಳೆಗಳನ್ನು ಎಲ್ಲಿ ಬೆಳೆಯುವುದು? ಎಂದು ಪ್ರಶ್ನಿಸಿದರು.
ಸಮಿತಿ ಸಂಚಾಲಕ ಬಿ.ಜೆ.ದೀಪಕ್ ಮಾತನಾಡಿ, ಜಿಲ್ಲೆಯಲ್ಲಿ ಸಿ ಆ್ಯಂಡ್ ಡಿ ಭೂಮಿಯ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕೂಡಲೇ ಉನ್ನತಾಧಿಕಾರಿಗಳು ಮತ್ತು ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಬೇಕು. ಸಮಿತಿ ಪ್ರತಿ ಗ್ರಾಮಗಳಲ್ಲಿ ಸಭೆ ಮಾಡಬೇಕು. ರೈತರ ಸಮಸ್ಯೆಯನ್ನು ಆಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಮೀಸಲು ಅರಣ್ಯವನ್ನು ರೈತರು ಕೇಳುತ್ತಿಲ್ಲ. ಕೃಷಿ ಭೂಮಿಯಲ್ಲಿ ಮರಗಿಡಗಳನ್ನು ಬೆಳೆದು ಪರಿಸರಕ್ಕೆ ರೈತರು ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಆದರೆ ಪೈಸಾರಿ ಕೃಷಿ ಭೂಮಿಯನ್ನು ಮೀಸಲು ಅರಣ್ಯ ಮಾಡುವುದಕ್ಕೆ ಮುಂದಾದರೆ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಿತಿ ಸಂಚಾಲಕ ಬಿ.ಎಂ.ಸುರೇಶ್, ಪದಾಧಿಕಾರಿ ಎಸ್.ಎಂ.ಡಿಸಿಲ್ವಾ ಇದ್ದರು.