ಮೂರು ತಿಂಗಳಿಗೊಮ್ಮೆ ಕೃಷಿ ಸಂವಾದ;ಜಿಲ್ಲಾಧಿಕಾರಿ ವೆಂಕಟ್​ರಾಜಾ ಘೋಷಣೆ; ರೈತರೊಂದಿಗೆ ಮಾತುಕತೆ ಕಾರ್ಯಕ್ರಮಕ್ಕೆ ಚಾಲನೆ

ಕೋಲಾರ ನಗರದ ರಂಗಮಂದಿರದಲ್ಲಿ ಮಂಗಳವಾರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕೀರ್ಣ ಮತ್ತು ರೈತರೊಂದಿಗೆ ಸಂವಾದವನ್ನು ಜಿಲ್ಲಾಧಿಕಾರಿ ವೆಂಕಟ್​ರಾಜಾ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಡಿ. ದೇವರಾಜ್​, ಜಿಪಂ ಸಿಇಒ ಯುಕೇಶ್​ ಕುಮಾರ್​ ಇದ್ದರು.
ಕೋಲಾರ ನಗರದ ರಂಗಮಂದಿರದಲ್ಲಿ ಮಂಗಳವಾರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕೀರ್ಣ ಮತ್ತು ರೈತರೊಂದಿಗೆ ಸಂವಾದವನ್ನು ಜಿಲ್ಲಾಧಿಕಾರಿ ವೆಂಕಟ್​ರಾಜಾ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಡಿ. ದೇವರಾಜ್​, ಜಿಪಂ ಸಿಇಒ ಯುಕೇಶ್​ ಕುಮಾರ್​ ಇದ್ದರು.
Published on

ಕೋಲಾರ: ಕರ್ತವ್ಯನಿಷ್ಠೆ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ ರೈತರಿಗೆ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ವೆಂಕಟ್​ರಾಜಾ ಪ್ರಶಂಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಮತ್ತು ರೈತರೊಂದಿಗೆ ಸಂವಾದಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಟೊಮ್ಯಾಟೊ, ಮಾವು ಜತೆಗೆ ಇತರ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಇದನ್ನು ಡಿ.ದೇವರಾಜ ಅವರು ಸಾಧಿಸಿ ತೋರಿಸಿದ್ದಾರೆ. ಎಲ್ಲ ರೈತರು ಇವರಂತೆಯೇ ಪರ್ಯಾಯ ಬೆಳೆ ಬೆಳೆದು, ನೇರ ಮಾರುಕಟ್ಟೆ ವ್ಯವಸ್ಥೆ ಕಂಡುಕೊಳ್ಳಬೇಕು. ಅವರ ಮಾರ್ಗದರ್ಶನದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಇಂಥ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಜಿಪಂ ಸಿಇಒ ಯುಕೇಶ್​ಕುಮಾರ್​ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಬದಲಾವಣೆ ಅಗತ್ಯ. ಯಾವುದೇ ಬೆಳೆ ಬೆಳೆಯುವ ಮುನ್ನ ಮಾರುಕಟ್ಟೆ ಬೇಡಿಕೆ, ಬೆಲೆ, ಇಳುವರಿ, ಲಾಭಾಂಶದ ಅರಿವು ಹೊಂದಿರಬೇಕು ಎಂದರು.

ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ವಡಗೂರು ಡಿ.ಎಲ್​.ನಾಗರಾಜ್​ ಮಾತನಾಡಿ, ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಜಿಲ್ಲಾಡಳಿತ ಯತ್ನಿಸುತ್ತಿದೆ. ಎಸ್ಪಿ ಡಿ.ದೇವರಾಜ ಪ್ರಗತಿಪರ ರೈತರಾಗಿದ್ದು, ಇತರ ರೈತರಿಗೆ ಅನುಭವ ಹಂಚುತ್ತಿರುವುದು ಅವರ ಜನಪರ ಕಾಳಜಿ ತೋರುತ್ತದೆ ಎಂದರು.

ಪ್ರೊಬೆೆಷನರಿ ಐಎಎಸ್​ ಅಧಿಕಾರಿ ವಿನಾಯಕ್​, ಜಂಟಿ ಕೃಷಿ ನಿರ್ದೇಶಕಿ ವಿ.ಡಿ.ರೂಪಾದೇವಿ, ತೋಟಗಾರಿಕೆ ಉಪನಿರ್ದೇಶಕ ಎಸ್​.ಆರ್​.ಕುಮಾರಸ್ವಾಮಿ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್​ ಡಾ.ಶಿವರಾಂ, ಹಿರಿಯ ವಕೀಲ ಕೆ.ವಿ.ಶಂಕರಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ಅಬ್ಬಣಿ ಶಿವಪ್ಪ, ಕೋಟಿಗಾನಹಳ್ಳಿ ಗಣೇಶಗೌಡ, ವಿ.ಗೀತಾ, ನಳಿನಿಗೌಡ ಮತ್ತಿತರರು ಇದ್ದರು.

ರೈತ ವ್ಯಾಪಾರಿಯಾದರೆ ಕೃಷಿ ಲಾಭದಾಯಕ; ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ ಅಭಿಮತ; ರೈತರ ಸಂವಾದದಲ್ಲಿ ಎಸ್ಪಿ ಉತ್ತರ

ಕೋಲಾರ: ಕೃಷಿಯಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಂಡು, ಬೇಡಿಕೆ ಇರುವ ಬೆಳೆ ಬೆಳೆಯಬೇಕು. ಇದರ ಜತೆಗೆ ಉತ್ಪನ್ನಗಳನ್ನು ಹತ್ತು ಮಂದಿ ಸೇರಿಕೊಂಡು ನೇರ ಗ್ರಾಹಕರಿಗೆ ಮಾರಾಟ ಮಾಡಬೇಕು. ಹಾಗಾದಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಿ.ದೇವರಾಜ ಹೇಳಿದರು.

ಎಲ್ಲರೂ ಟೊಮ್ಯಾಟೊ ಹಾಕಿ ನಷ್ಟ ಹೊಂದುವುದಕ್ಕಿಂತ ಪರ್ಯಾಯ ಬೆಳೆ ಬೆಳೆಯಬೇಕು. 10 ಮಂದಿ ಸೇರಿ ಬೆಂಗಳೂರಿನ 10 ಅಪಾರ್ಟ್​ಮೆಂಟ್​ಗಳವರ ಜತೆ ಚರ್ಚಿಸಿ ನಿತ್ಯ ಹಣ್ಣು ತರಕಾರಿ ಮಾರಬಹುದು. ದಿನಕ್ಕೆ 30 ಸಾವಿರ ರೂ. ವಹಿವಾಟು ನಡೆದರೆ ತಿಂಗಳಿಗೆ 9 ಲಕ್ಷ ರೂ. ಸಿಗುತ್ತದೆ. ಖರ್ಚು ಕಳೆದು ಅಧಿಕ ಲಾಭಗಳಿಸಬಹುದು. ಹೆಸರಘಟ್ಟದ ನಮ್ಮ ತೋಟದಲ್ಲಿ ಬೆಳೆದ ಉತ್ಪನ್ನಗಳನ್ನು ಬೆಂಗಳೂರು ಉತ್ತರದ ಅಪಾರ್ಟ್​ಮೆಂಟ್​ಗಳಿಗೆ ಸರಬರಾಜು ಮಾಡುತ್ತಿದ್ದು, ದಲ್ಲಾಳಿಮುಕ್ತ ವ್ಯಾಪಾರ ಕಂಡುಕೊಂಡಿದ್ದೇವೆ. ರೈತರು ಒಣಜಂಭ ಬಿಟ್ಟು ಮಾರಾಟ ಮಾಡುವುದನ್ನು ಕಲಿತಾಗ ಉದ್ಧಾರ ಸಾಧ್ಯ ಎಂದರು.

ಸಂವಾದದಲ್ಲಿ ರೈತ ತಿರುಮಲಕೊಪ್ಪ ಗೋಪಾಲಪ್ಪ ಪ್ರಶ್ನೆ ಕೇಳಿದರು.
ಜುಕಿನಿ ಸೌತೇಕಾಯಿ ಪ್ರದರ್ಶಿಸಿದ ವಿದ್ಯಾರ್ಥಿಗಳು

ಪ್ರಶ್ನೆಗಳ ಸುರಿಮಳೆ: ನೂರಾರು ರೈತರು ಸಂವಾದದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಎಸ್ಪಿ ಡಿ.ದೇವರಾಜ, ಡ್ರ್ಯಾಗನ್ ​ಫ್ರುಟ್​ಗೆ ರಸಗೊಬ್ಬರ ಮತ್ತು ಕೀಟನಾಶಕ ಹೆಚ್ಚಿಗೆ ಬಳಸುವ ಅಗತ್ಯ ಬರುವುದಿಲ್ಲ. ಆರು ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ಹಾಕಿದರೆ ಸಾಕು. 3 ವರ್ಷದ ಬೆಳೆ. ಇದನ್ನು ವಂಡರ್​​ಫ್ರುಟ್​ ಎಂದು ಸಹ ಕರೆಯುತ್ತಾರೆ. ಬೆಂಗಳೂರಿನಲ್ಲಿ ಭಾರಿ ಬೇಡಿಕೆಯಿದೆ. ಹೊರದೇಶಗಳಿಂದ ಇದನ್ನು ನಿತ್ಯ 2 ಕಂಟೈನರ್​ಗಳಲ್ಲಿ ಚೆನ್ನೈಗೆ ಆಮದು ಮಾಡಿಕೊಳ್ಳಲಾಗುತ್ತಿದೆ. ಟೊಮ್ಯಾಟೊಗೆ 2.60 ಲಕ್ಷ ರೂ. ಬಂಡವಾಳ ಹಾಕಬೇಕಾಗುತ್ತದೆ. ಸ್ಟ್ರಾಬೆರಿಗೆ 2.96 ಲಕ್ಷ ರೂ., ಬಟರ್​ಫ್ರುಟ್​ಗೆ 56 ಸಾವಿರ ರೂ.ಬಂಡವಾಳ ಹಾಕಿದರೆ ಸಾಕು. ಜುಕಿನಿ ಸೌತೇಕಾಯಿಗೆ ಕಡಿಮೆ ಭೂಮಿಯಲ್ಲಿ ಕಡಿಮೆ ಖರ್ಚಿನಲ್ಲಿ ಬೆಳೆದು ಬೆಂಗಳೂರು ಮತ್ತು ಉಸ್ಕೂರು ಮಾರುಕಟ್ಟೆಗೆ ಸಾಗಿಸಬಹುದು ಎಂದರು.

ಇನ್ನು ಕೆಜಿ ಡ್ರಾಗನ್​ಫ್ರುಟ್​ ಮತ್ತು ಬಟರ್ ​ಫ್ರುಟ್​ಗೆ ಮಾರುಕಟ್ಟೆಯಲ್ಲಿ 150ರಿಂದ 200ರೂ. ಬೆಲೆ ಇರುತ್ತದೆ. ಸ್ಟ್ರಾಬೆರಿಗೆ 350ರೂ. ಇದ್ದರೆ, ಜುಕಿನಿ ಸೌತೇಕಾಯಿಗೆ 30ರೂ.ದರವಿರುತ್ತದೆ. ಜುಕಿನಿ ಹೊರತುಪಡಿಸಿ ಉಳಿದ ಬೆಳೆಗಳಿಗೆ 5ರಿಂದ 10ಲಕ್ಷ ರೂ. ಆದಾಯಕ್ಕೆ ಮೋಸವಿಲ್ಲ. ರೈತರು ಒಂದೇ ಬೆಳೆ ಹಾಕುವುದು ಬಿಟ್ಟು ಬಹುವಿಧದ, ಆದಾಯ ಹೆಚ್ಚು ಬರುವ, ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನಿಯಾದ ಎಸ್ಪಿ ಡಿ.ದೇವರಾಜ

ಸಸ್ಯಶಾಸ್ತ್ರ ಪದವೀಧರ ಎಸ್ಪಿ ಡಿ.ದೇವರಾಜ ಕೃಷಿಕರೂ ಹೌದು. ಸ್ವಂತ ಊರು ಕೋರಗಂಡಹಳ್ಳಿಯಲ್ಲಿ ಡ್ರ್ಯಾಗನ್​, ಬಟರ್​​ ಫ್ರುಟ್​, ಸ್ಟ್ರಾಬೆರಿ ಮತ್ತು ಜುಕಿನಿ ಸೌತೇಕಾಯಿ ಸೇರಿ ವಿವಿಧ ತರಕಾರಿ ಬೆಳೆದು ಮಾದರಿಯಾಗಿದ್ದಾರೆ. ತನ್ನಂತೆಯೇ ಇತರರೂ ಕೈತುಂಬಾ ಹಣ ಸಂಪಾದಿಸಬೇಕೆಂಬ ಅಭಿಲಾಷೆ ಹೊಂದಿ ರೈತರ ಸಂವಾದ ಆಯೋಜಿಸಿದ್ದರು. ಪೊಲೀಸ್​ ಕೆಲಸಕ್ಕೆ ಬರುವುದಕ್ಕೆ ಮುನ್ನ ಉಪನ್ಯಾಸಕರಾಗಿದ್ದ ಡಿ.ದೇವರಾಜ ಇತ್ತೀಚೆಗೆ ಸರ್ಕಾರಿ ಶಾಲೆಯೊಂದರಲ್ಲಿ ಪಾಠ ಮಾಡಿ ಗಮನಸೆಳೆದಿದ್ದರು. ಸಂವಾದದಲ್ಲಿ ರೈತರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುವ ಮೂಲಕ ಕೃಷಿ ಸಂಪನ್ಮೂಲ ವ್ಯಕ್ತಿಯಾಗಿ ಗಮನಸೆಳೆದರು.

ಕೋಲಾರ ನಗರದ ರಂಗಮಂದಿರದಲ್ಲಿ ಮಂಗಳವಾರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕೀರ್ಣ ಮತ್ತು ರೈತರೊಂದಿಗೆ ಸಂವಾದವನ್ನು ಜಿಲ್ಲಾಧಿಕಾರಿ ವೆಂಕಟ್​ರಾಜಾ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಡಿ. ದೇವರಾಜ್​, ಜಿಪಂ ಸಿಇಒ ಯುಕೇಶ್​ ಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net