

ಬೆಂಗಳೂರು:
ಕಳೆದ ಸಾಲಿನಲ್ಲಿ ಬರದಿಂದ ಆದ ಮುಂಗಾರು ಬೆಳೆ ಹಾನಿಗೆ 1791 ಕೋಟಿ ಬೆಳೆ ವಿಮೆ ಲೆಕ್ಕಾಚಾರ ಮಾಡಿ ಇತ್ಯರ್ಥ ಪಡಿಸಲಾಗಿದೆ. ಇದೇ ರೀತಿ ಹಿಂಗಾರು ಬೆಳೆ ವಿಮೆ ಪರಿಹಾರ ಹಣ ತಲುಪಿಸಲು ವಿಮಾ ಕಂಪನಿಗಳೊಂದಿಗೆ ಸಮನ್ವಯ ಮಾಡಿ ಎಂದು ಕೃಷಿ ಸಚಿವರಾದ ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಜಲಾನಯನ ಇಲಾಖೆಗಳು, ಕರ್ನಾಟಕ ರಾಜ್ಯ ಬೀಜ ನಿಗಮ ಕೃಷಿಕ ಸಮಾಜದ ಅಧಿಕಾರಿಗಳ ಸಭೆ ನಡೆಸಿದ ಅವರು, ಕಳೆದ ಸಾಲಿನ ವಿಮೆ ಇತ್ಯರ್ಥದ ಜೊತೆಗೆ ಈ ಮುಂಗಾರಿಗೂ ಬೆಳೆ ವಿಮೆ ನೊಂದಣಿ ಹಾಗೂ ರೈತ ಜಾಗೃತಿಗೆ ಆದ್ಯತೆ ನೀಡಿ ಎಂದು ನಿರ್ದೇಶನ ನೀಡಿದರು.
2023-24ರ ಮುಂಗಾರಿನಲ್ಲಿ 19.14 ಲಕ್ಷ ರೈತರು 15.10 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆ ನೊಂದಾಯಿಸಿದ್ದರು. ನಿಯಮಾನುಸಾರ ಪರಿಶೀಲಿಸಿ ಅಂತಿಮವಾಗಿ ಬಾಕಿ ಇರುವ 130 ಕೋಟಿ ರೂ ಗಳನ್ನು ಶೀಘ್ರ ವಿತರಣೆ ಮಾಡಿ ಎಂದರು.
2023-24 ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 5.88 ಲಕ್ಷ ರೈತರು 5.43 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೊಂದಾಯಿಸಿದ್ದರು. ಈ ವರಗೆ ಪ್ರಿವೆಂಟೆಡ್ ಸೋಯಿಂಗ್, ಸ್ಥಳೀಯ ಪ್ರಕೃತಿ ವಿಕೋಪ ಮತ್ತು ಮಿಡ್ ಸೀಜನ್ ಅಡ್ವರ್ಸಿಟಿ ಅಡಿ 16053 ರೈತರಿಗೆ 7.93 ರೂ ಕೋಟಿ ಪರಿಹಾರ ಇತ್ಯರ್ಥ ಪಡಿಸಲಾಗಿದೆ. ಉಳಿದ ರೈತರಿಗೆ ವಿಮೆ ಹಣ ತಲುಪಿಸಿ ಎಂದರು.
ರಾಜ್ಯಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿದ್ದು, ಮುಂಗಾರು ಕೂಡ ಆರಂಭವಾಗಿದೆ .ಬಿತ್ತನೆ ಬೀಜ ,ರಸಗೊಬ್ಬರ ಬೇಡಿಕೆ ಆಧಾರದಲ್ಲಿ ಪೂರೈಕೆಯಾಗಿದ್ದು ಎಲ್ಲೂ ಕೊರತೆಯಾಗದಂತೆ ಎಚ್ಚರ ವಹಿಸಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದರು.
ಕೃಷಿ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಾರಂಭವಾಗ ಬೇಕಿರುವ ವಿವಿಧ ಕಟ್ಟಡ ಕಾಮಗಾರಿಗಳನ್ನು ಅತ್ಯಂತ ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಕೃಷಿ ಸಚಿವರು ಸೂಚನೆ ನೀಡಿದರು.
ಕೃಷಿ ಇಲಾಖೆ ಆಯುಕ್ತ ಎ.ವೈ ಪಾಟೀಲ್ ಮಾತನಾಡಿ, ಆರ್ಥಿಕ ಸಾಂಖ್ಯಿಕ ನಿರ್ದೇಶನಾಲಯ ಬೆಳೆ ಕಟಾವು ಪ್ರಯೋಗಗಳ ಇಳುವರಿ ನೀಡಿರುವ ಹಿಂ ಗಾರು ಹಂಗಾಮಿನ 4368 ವಿಮಾ ಘಟಕಗಳಿಗೆ 103044 ರೈತರ 152.71 ಕೋಟಿ ಬೆಳೆ ವಿಮೆ ಪರಿಹಾರ ಮೊತ್ತ ಲೆಕ್ಕಾಚಾರ ಮಾಡಿದ್ದು ವಿಮಾ ಸಂಸ್ಥೆಗಳಿಂದ ಇತ್ಯರ್ಥ ಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ರೈತ ಸಂಪರ್ಕ ಕೇಂದ್ರ, ಗೊದಾಮು, ಮಿಲೆಟ್ ಸರಪಳಿ ಪಾರ್ಕ್ ಮತ್ತಿತರ ಕಟ್ಟಡಗಳನ್ನು ಆದಷ್ಟು ಬೇಗ ಮುಕ್ತಾಯ ಗೊಳಿಸಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ಸೂಚಿಸಿದರು. ಇನ್ನೂ ಪ್ರಾರಂಭವಾಗದೇ ಇರುವ ಕಾಮಗಾರಿಗಳಿಗೆ ಬೇಗ ಚಾಲನೆ ನೀಡಬೇಕು. ಜಾಗದ ಸಮಸ್ಯೆ ಇರುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಸ್ಥಳ ಪಡೆದು ಕೆಲಸ ಪ್ರಾರಂಭಿಸಬೇಕು ಎಂದು ತಿಳಿಸಿದರು.
ಜಲಾನಯನ ಇಲಾಖೆ ಆಯುಕ್ತರಾದ ಗಿರೀಶ್ ,ಕೃಷಿ ಇಲಾಖೆ ನಿರ್ದೇಶಕರಾದ ಡಾ ಪುತ್ರ, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಹಾಜರಿದ್ದರು.