

ನವದೆಹಲಿ: ಕೃಷಿ ವಲಯಕ್ಕೆ ಉತ್ತೇಜನ ನೀಡುವ ಜತೆಗೆ ರೈತರನ್ನು ಅಧಿಕ ಬಡ್ಡಿ ದರದ ಸುಳಿಯಿಂದ ಪಾರು ಮಾಡುವ ಉದ್ದೇಶದೊಂದಿಗೆ ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಕೃಷಿ ಸಾಲದ ಗುರಿಯನ್ನು 18 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆ ನಿಚ್ಚಳವಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿ 16.50 ಲಕ್ಷ ಕೋಟಿ ರೂ.ಇದೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಬಜೆಟ್ನಲ್ಲಿ ಕೃಷಿ ಸಾಲ ವಿತರಣೆ ಪ್ರಮಾಣವನ್ನು ಹಿಗ್ಗಿಸುತ್ತದೆ. ಈ ಸಾರಿ ಫೆ.1ರಂದು ಮಂಡನೆಯಾಗುವ 2022-23ನೇ ಸಾಲಿನ ಬಜೆಟ್ನಲ್ಲಿ ಕೃಷಿ ಸಾಲವನ್ನು 18ರಿಂದ 18.50 ಲಕ್ಷ ಕೋಟಿಗೆ ಹೆಚ್ಚಳ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿರುವುದಾಗಿ ಮೂಲಗಳು ತಿಳಿಸಿವೆ. 2017-18ರ ಬಜೆಟ್ನಲ್ಲಿ 10 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ ನಿಗದಿಯಾಗಿತ್ತು. ಆದರೆ, ಇದು 11.68 ಲಕ್ಷ ಕೋಟಿ ರೂಪಾಯಿವರೆಗೂ ಹಿಗ್ಗಿತು. 2016-17ರಲ್ಲಿ 9 ಲಕ್ಷ ಕೋಟಿ ರೂಪಾಯಿ ಗುರಿ ಇತ್ತು. ಆದರೆ 10.66 ಲಕ್ಷ ಕೋಟಿ ರೂಪಾಯಿ ತಲುಪಿತು.
ರೈತರಿಗೆ ಹೆಚ್ಚು ಅನುಕೂಲ: ರೈತರು ಅಧಿಕ ಬಡ್ಡಿ ದರಕ್ಕೆ ಕೈಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ಸರ್ಕಾರವೇ ಪ್ರತಿ ವರ್ಷ ಕೃಷಿಕರಿಗೆ ಸಾಂಸ್ಥಿಕ ಸಾಲವನ್ನು ಕಡಿಮೆ ಬಡ್ಡಿ ದರಕ್ಕೆ ಒದಗಿಸುತ್ತದೆ. ಅಸಾಂಸ್ಥಿಕ ಮೂಲದಿಂದ ಪಡೆಯುವ ಸಾಲಕ್ಕೆ ಸಾಧಾರಣವಾಗಿ ಶೇ. 9ರ ಬಡ್ಡಿದರ ಇರುತ್ತದೆ. ಆದರೆ ಸರ್ಕಾರ ಒದಗಿಸಿಕೊಡುವ ಕಡಿಮೆ ಅವಧಿಯ 3 ಲಕ್ಷ ರೂ.ವರೆಗಿನ ಬೆಳೆ ಸಾಲಕ್ಕೆ ಶೇ. 2 ಸಬ್ಸಿಡಿ ನೀಡುತ್ತದೆ. ಸಕಾಲದಲ್ಲಿ ಸಾಲಮರುಪಾವತಿ ಮಾಡುವ ರೈತರಿಗೆ ಶೇ. 3 ಬಡ್ಡಿ ದರ ಕಡಿತ ಕೂಡ ಮಾಡುತ್ತದೆ. ಇದರಿಂದ ಒಟ್ಟಾರೆ ಬಡ್ಡಿ ದರ ಶೇ. 4 ಆಗುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡಲು ಆರ್ಬಿಐ ಕೂಡ ಅಡಮಾನ ರಹಿತ ಸಾಲವನ್ನು 1 ಲಕ್ಷ ರೂ.ದಿಂದ 1.60 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ.