

ಬೆಂಗಳೂರು: ಸರ್ಕಾರದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಜಿಎಸ್‌ಟಿ ದರದ ವ್ಯತ್ಯಾಸದ ಮೊತ್ತವನ್ನು ಗುತ್ತಿಗೆದಾರರಿಗೆ ವಿತರಿಸಲು ಪೂರಕ ಒಪ್ಪಂದ ಮಾಡಿಕೊಳ್ಳದಂತೆ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.
ಜಿಎಸ್‌ಟಿ ದರದ ವ್ಯತ್ಯಾಸದ ಮೊಬಲಿಗೆ ಸಂಗ್ರಹಣಾ ಪ್ರಾಧಿಕಾರಗಳ ಹಂತದಲ್ಲಿ ಪದೇ ಪದೆ ಆಡಳಿತಾತ್ಮಕ ಅನುಮೋದನೆ ಪಡೆಯುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಜಿಎಸ್‌ಟಿ ಮೊತ್ತವನ್ನು ಸರ್ಕಾರದಿಂದ ನಿಗದಿಪಡಿಸಿದ ದರಗಳ ಅನ್ವಯ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಿರುವುದರಿಂದ ಒಪ್ಪಂದ ಅನಗತ್ಯ ಎಂದು ಸ್ಪಷ್ಟಪಡಿಸಲಾಗಿದೆ.
ಜಿಎಸ್‌ಟಿ ಹೊರತುಪಡಿಸಿ ಇತರ ಕಾರಣಗಳಿಂದ ಮೂಲ ಅಂದಾಜು ಪರಿಷ್ಕರಣೆಯಾದಲ್ಲಿ ಮಾತ್ರ ಅಂತಹ ಪ್ರಕರಣಗಳಿಗೆ ನಿಯಮಾನುಸಾರ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಬೇಕು ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಈ ಹಿಂದಿನ ಕಾಮಗಾರಿಗಳಿಗೆ ಶೇ.18 ಜಿಎಸ್‌ಟಿ ಅನ್ವಯಿಸಲಾಗುತ್ತಿತ್ತು. ಈಗ ಇದನ್ನು ಶೇ.12ಕ್ಕೆ ಇಳಿಸಲಾಗಿದೆ. ಇತ್ತೀಚಿಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನೇತೃತ್ವದ ಪದಾಧಿಕಾರಿಗಳ ನಿಯೋಗವು ಸಿಎಂ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಇದನ್ನಾಧರಿಸಿ ಹಣಕಾಸು ಇಲಾಖೆಯ ಎಸಿಎಸ್ ಆಗಿರುವ ಎಲ್.ಕೆ.ಅತೀಕ್ ಸುತ್ತೋಲೆ ಹೊರಡಿಸಿದ್ದಾರೆ.
ಜಿಎಸ್‌ಟಿ ಬಿಟ್ಟು ಕಾಮಗಾರಿಗಳಿಗೆ ಟೆಂಡರ್:
ಜಿಎಸ್‌ಟಿ ಹೊರತುಪಡಿಸಿ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಬೇಕು ಎಂದು ಇನ್ನೊಂದು ಸುತ್ತೋಲೆಯಲ್ಲಿ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಸರ್ಕಾರದಿಂದ ಒಪ್ಪಿಗೆ ಪಡೆಯಲಾದ ಏಕರೂಪದ ಅನುಸೂಚಿ ದರಗಳ ಅನ್ವಯ ಅಂದಾಜು ಪಟ್ಟಿಯಲ್ಲಿ ಜಿಎಸ್‌ಟಿ ಮೊತ್ತವನ್ನು ಹೊರತುಪಡಿಸಿ ಟೆಂಡರ್ ಕರೆಯಬೇಕು. ಟೆಂಡರ್ ಮೊತ್ತಕ್ಕೆ ಮಾತ್ರ ಇಎಂಡಿ, ಖಾತರಿ, ಭದ್ರತೆಯನ್ನು ಪಡೆಯಬೇಕು ಎಂದು ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಸರ್ಕಾರದ ನಿರ್ಧಾರವನ್ನು ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ ಹಾಗೂ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಸ್ವಾಗತಿಸಿದ್ದಾರೆ.