ನಮ್ಮ ಪ್ರಧಾನಿ ಏಳು ಜನ್ಮ ಎತ್ತಿದರೂ ಲಾಲು ಸಾಧನೆ ಸರಿಗಟ್ಟಲು ಸಾಧ್ಯವಿಲ್ಲ: ಅಮಿತ್​ ಷಾ | Amit Shah

Amit Shah | ಅಮಿತ್​ ಷಾ
Amit Shah | ಅಮಿತ್​ ಷಾ
Published on
ಪಾಟ್ನಾ: ಬಿಹಾರದ ಎರಡನೇ ಹಂತದ ಚುನಾವಣೆಯ ಕಾವು ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆ ವೇಗ ಪಡೆದುಕೊಳ್ಳುತ್ತಿದ್ದು, ಇಂದು (ನ 8) ಪ್ರಚಾರ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಷಾ(Amit Shah) ಮಹಾ ಮೈತ್ರಿಕೂಟದ ವಿರುದ್ಧ ಹರಿಹಾಯ್ದರು.
ಪೂರ್ಣಿಯಾ, ಕತಿಹಾರ್ ಮತ್ತು ಸುಪೌಲ್‌ನಲ್ಲಿ ನಡೆದ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಮಾತನಾಡಿದ ಅಮಿತ್​ ಷಾ, ಲಾಲು ಪ್ರಸಾದ ಯಾದವ್​ ಮಾಡಿದನ್ನು ಪ್ರಧಾನಿ ನರೇಂದ್ರ ಮೋದಿ ಏಳು ಜನ್ಮಗಳಲ್ಲೂ ಮಾಡಲು ಸಾಧ್ಯವಿಲ್ಲ ಎಂದರು.
ಸಾಮಾಜಿಕ ನ್ಯಾಯವನ್ನು ತರುವ ಮತ್ತು ರೈಲ್ವೆಗೆ ಲಾಭ ಗಳಿಸುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ತಮ್ಮ ತಂದೆಯ ಸಾಧನೆಯನ್ನು ಏಳು ಜೀವಿತಾವಧಿಯಲ್ಲಿಯೂ ಸರಿಗಟ್ಟಲು ಸಾಧ್ಯವಿಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಕ್ಕೆ ಅಮಿತ್ ಷಾ ಪ್ರತಿಕ್ರಿಯೆ ನೀಡಿದ್ದು, ತೇಜಸ್ವಿ​ ಮಾತನ್ನು ನಾನು ಒಪ್ಪುತ್ತೇನೆ, ಹೌದು ನಮ್ಮ ಪ್ರಧಾನಿ ಹಗರಣಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಸೀಮಾಂಚಲ್ ಪ್ರದೇಶವನ್ನು ನುಸುಳುಕೋರರ ತಾಣವನ್ನಾಗಿ ಮಾಡಲು ಇಬ್ಬರೂ ವಿರೋಧ ಪಕ್ಷದ ನಾಯಕರು ಕೆಲಸ ಮಾಡುತ್ತಿದ್ದು, ಅತಿ ಶೀಘ್ರದಲ್ಲಿ ಅಕ್ರಮ ವಲಸಿಗರ ವಿರುದ್ಧ ದೃಢ ಕ್ರಮ ಕೈಗೊಳ್ಳಲಾಗುವುದು, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕುತ್ತೇವೆ ಮತ್ತು ಅವರನ್ನು ಅವರ ದೇಶಕ್ಕೆ ಗಡೀಪಾರು ಮಾಡುತ್ತೇವೆ ಎಂಬ ಭರವಸೆ ನೀಡಿದರು.

ಮತದಾರ ಅಧಿಕಾರ ಯಾತ್ರೆ...

ಬಿಹಾರ ವಿಧಾನಸಭಾ ಚುನಾವಣೆಗೂ ಕೆಲ ವಾರಗಳ ಮುನ್ನ ರಾಹುಲ್ ಮತ್ತು ತೇಜಸ್ವಿ ನಡೆಸಿದ ಮತದಾರ ಅಧಿಕಾರ ಯಾತ್ರೆಯನ್ನು ಉಲ್ಲೇಖಿಸಿ ಮಾತನಾಡಿದ ಷಾ, ಒಳನುಸುಳುಕೋರರು ಬಿಹಾರದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬಾರದು ಎನ್ನುವುದು ನಿಮ್ಮ ನಿಲುವಾದರೆ, ಅವರನ್ನು ಉಳಿಸುವ ಯಾತ್ರೆ ಹಮ್ಮಿಕೊಂಡ ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟವನ್ನು ಸೋಲಿಸಿ ಎಂದು ನೆರದಿದ್ದವರಿಗೆ ಕರೆ ನೀಡಿದರು.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರರಾದ ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಮೊದಲ ಆದ್ಯತೆ ನೀಡುತ್ತಿದ್ದು, ಬಿಹಾರ ಅಥವಾ ದೆಹಲಿಯಲ್ಲಿ ಅವರಿಗೆ ಯಾವ ಸ್ಥಾನಗಳು ಖಾಲಿ ಇಲ್ಲ ಎಂದು ಹೇಳಿದರು.
ನವೆಂಬರ್ 6 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯದ ಅರ್ಧದಷ್ಟು ಭಾಗವು ಈಗಾಗಲೇ ಮಹಾ ಮೈತ್ರಿಕೂಟಕ್ಕೆ ಸೋಲಿನ ಬಾಗಿಲು ತೋರಿಸಿದ್ದು, ಈ ಚುನಾವಣೆಯಲ್ಲಿ 160 ಸ್ಥಾನಗಳನ್ನು ಗಳಿಸುವ ಮೂಲಕ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸುತ್ತದೆ ಎಂದು ಭವಿಷ್ಯ ನುಡಿದರು.
ಬಿಹಾರವನ್ನು ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಗಳ ಬಗ್ಗೆ ಉಲ್ಲೇಖಿಸಿದ ಷಾ, ರಾಜ್ಯದಲ್ಲಿ ಪ್ರವಾಹಕ್ಕೆ ಕಾರಣವಾಗುವ ನೇಪಾಳದ ನದಿಗಳ ನೀರನ್ನು ರೈತರ ಹೊಲಗಳಿಗೆ ನೀರಾವರಿಗಾಗಿ ಬಳಸುವ ಪ್ರಯತ್ನಗಳ ಕುರಿತು ಮಾತನಾಡಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net