

ನವದೆಹಲಿ: ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ಗೆ ಭೇಟಿ ನೀಡಿದರು.
ಅಹಮದಾಬಾದ್ನಿಂದ ಕುಟುಂಬ ಸಮೇತ ತೆರಳಿದ ಟ್ರಂಪ್ ಸಂಜೆ 4.20ರ ಹೊತ್ತಿಗೆ ಆಗ್ರಾಗೆ ಬಂದಿಳಿದರು. ಈ ವೇಳೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್ ಮತ್ತು ಮುಖ್ಯಮಂತ್ತಿ ಯೋಗಿ ಆದಿತ್ಯಾ ನಾಥ್ ಟ್ರಂಪ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಸಾಂಪ್ರದಾಯಿಕ ಕಲೆಗಳ ಮೂಲಕ ಟ್ರಂಪ್ ದಂಪತಿಗೆ ಗೌರವ ಸಲ್ಲಿಸಿದರು. ಬಳಿಕ ಕಾರು ಹತ್ತಿ ಟ್ರಂಪ್ ದಂಪತಿ ತಾಜ್ ಮಹಲ್ ಕಡೆ ಹೊರಟರು.
ತಾಜ್ ಮಹಲ್ಗೆ ಆಗಮಿಸಿದ ಟ್ರಂಪ್ ದಂಪತಿಗೆ ಅಚ್ಚರಿಯು ಕಾದಿತ್ತು. ವಿವಿಧ ಕಲಾ ತಂಡಗಳು ಟ್ರಂಪ್ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಮೆರಿಕ ಮತ್ತು ಭಾರತ ಬಾವುಟ ಹಿಡಿದು ವಿದ್ಯಾರ್ಥಿಗಳು ಟ್ರಂಪ್ ದಂಪತಿಯನ್ನು ಖಷಿಯಿಂದಲೇ ಸ್ವಾಗತಿಸಿದರು. ರಸ್ತೆಯುದ್ದಕ್ಕೂ ಜನ ವಿಶ್ವದ ದೊಡ್ಡಣ್ಣನನ್ನು ಕಣ್ತುಂಬಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಅಲ್ಲದೆ, ಟ್ರಂಪ್ ದಂಪತಿ ಸ್ವಾಗತ ಕೋರುವ ಪೋಸ್ಟರ್ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿದ್ದವು.
ಇದಕ್ಕೂ ಮುನ್ನು ಬೆಳಗ್ಗೆಯಷ್ಟೇ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಪತ್ನಿ ಮೆಲೆನಿಯಾ ಟ್ರಂಪ್, ಪುತ್ರಿ ಇವಾಂಕ ಮತ್ತು ಅಳಿಯ ಜರೇದ್ ಕುಶ್ನರ್ ಹಾಗೂ ಅಮೆರಿಕ ನಿಯೋಗದೊಂದಿಗೆ ಅಧ್ಯಕ್ಷ ಟ್ರಂಪ್ ಬಂದಿಳಿದರು. ಬಳಿಕ ಮೆರವಣಿಗೆಯಲ್ಲಿ ಸ್ಮರಣೀಯ ಸ್ವಾಗತದೊಂದಿಗೆ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಮೊಟೇರಾ ಸ್ಟೇಡಿಯಂಗೆ ತೆರಳಿದರು. ನಂತರ "ನಮಸ್ತೆ ಟ್ರಂಪ್" ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ತಾಜ್ ಮಹಲ್ ನೋಡುವ ಇಂಗಿತವನ್ನೂ ಟ್ರಂಪ್ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್)