

ಶಿವಮೊಗ್ಗ: ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಿದ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಆ. 22ರಿಂದ 31ರವರೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಅಗ್ನಿವೀರ್ ರ್ಯಾಲಿ (Rally)ನಡೆಯಲಿದೆ ಎಂದು ಕರ್ನಲ್ ಕೃಷ್ಣನ್ ಕಶ್ಯಪ್ ಹೇಳಿದರು.
ಆ.29ರವರೆಗೆ ರ್ಯಾಲಿ ಆಯೋಜಿಸಲಾಗಿದೆ. ಹವಾಮಾನ ವೈಪರೀತ್ಯ ಕಾರಣದಿಂದ ಹೆಚ್ಚುವರಿಯಾಗಿ ಆ.31ರವರೆಗೆ ಎರಡು ದಿನ ಮೀಸಲಿಟ್ಟುಕೊಳ್ಳಲಾಗಿದೆ. ರ್ಯಾಲಿಯಲ್ಲಿ ದೈಹಿಕ ಕ್ಷಮತೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರು ಸೈನಿಕ ನೇಮಕಾತಿ ಘಟಕ ನಡೆಸಿದ ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ರವಾನಿಸಿದ್ದು, ಪ್ರತಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ. ನೇಮಕಾತಿ ನಿಯಮಾನುಸಾರ ಅಭ್ಯರ್ಥಿಯ ದೈಹಿಕ ಸಾಮರ್ಥ್ಯ ಧೃಡೀಕರಿಸುವ ಕ್ರೀಡೆ, ಚಟುವಟಿಕೆ ನಡೆಸಲಾಗುವುದು. ಪ್ರತಿ ದಿನ 800ರಿಂದ 900 ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಅಭ್ಯರ್ಥಿಗಳಿಗೆ ಳ ಅನುಕೂಲಕ್ಕಾಗಿ ನೀರು, ಶೌಚಗೃಹ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಸೈನಿಕ ಅಧಿಕಾರಿ ದುರ್ಗಾಪ್ರಸಾದ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠ್ ಸುದ್ದಿಗೋಷ್ಠಿಯಲ್ಲಿದ್ದರು.
ಆ.23ರಂದು ಧ್ವಜಾರೋಹಣ
ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆಯೊಂದಿಗೆ ದಾಖಲಾತಿ ಪರಿಶೀಲನೆ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಬಂಧಿತ ಇಲಾಖೆಗಳ ಸ್ಥಳೀಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಆ.23ರಂದು ಬೆಳಗ್ಗೆ 6.30ಕ್ಕೆ ಸಂಸದ ಬಿ.ವೈ.ರಾಘವೇಂದ್ರ ಧ್ವಜಾರೋಹಣ ನೆರವೇರಿಸುವರು ಎಂದು ಕರ್ನಲ್ ಕೃಷ್ಣನ್ ಕಶ್ಯಪ್ ಹೇಳಿದರು. ನೇಮಕಾತಿ ಪ್ರಕ್ರಿಯೆಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರವಿದೆ ಎಂದರು.
ಯಾವ್ಯಾವ ಜಿಲ್ಲೆ?
ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವರು. ರ‌್ಯಾಲಿಯಲ್ಲಿ ಉತ್ತೀರ್ಣರಾದವರಿಗೆ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.