

ಬೆಂಗಳೂರು: 42 ದಿನಗಳಿಂದ ಬಹುತೇಕ ನಿಶ್ಯಬ್ದವಾಗಿದ್ದ ರಾಜಧಾನಿ ಸೋಮವಾರ ಸಹಜ ಸ್ಥಿತಿಗೆ ಮರಳಿದೆ. ವಾಹನ ಓಡಾಟ, ಟ್ರಾಫಿಕ್ ಕಿರಿಕಿರಿ, ಅಂಗಡಿ ಮುಂಗಟ್ಟುಗಳ ಬಳಿ ಜನಜಂಗುಳಿ, ವಾಣಿಜ್ಯ ವಹಿವಾಟು, ಸರ್ಕಾರಿ ಕಚೇರಿ, ಕೈಗಾರಿಕೆ ಸೇರಿ ಬಹುತೇಕ ಚಟುವಟಿಕೆಗಳು ಪುನರಾರಂಭಗೊಂಡಿವೆ.
ಒಂದೂವರೆ ತಿಂಗಳಿಂದ ಮನೆಯಲ್ಲೇ ಕುಳಿತು ಬೇಸತ್ತಿದ್ದ ಜನ ಸೋಮವಾರ ಲಾಕ್ಡೌನ್ ಸಡಿಲಿಕೆ ಆಗುತ್ತಿದ್ದಂತೆ ಬೆಳ್ಳಂಬೆಳಗ್ಗೆಯೇ ಹೊರಬಂದಿದ್ದರು. ದ್ವಿಚಕ್ರ ವಾಹನ, ಕಾರು, ಆಟೋ, ಟ್ಯಾಕ್ಸಿಗಳ ಸಂಚಾರದಿಂದ ನಗರದ ಕೆಲವೆಡೆ ದಟ್ಟಣೆ ಉಂಟಾಗಿತ್ತು. ಹಲವು ಕಂಪನಿಗಳು ತೆರೆದಿರುವುದರಿಂದ ಕೆಲಸಕ್ಕೆ ಹೋಗುವ ನೌಕರರ ಸಂಚಾರವೂ ಹೆಚ್ಚಾಗಿತ್ತು.
ನಗರದ ಎಲ್ಲ ಭಾಗಗಳಲ್ಲೂ ಬಟ್ಟೆ, ಆಭರಣ ಮಳಿಗೆಗಳು, ಕೈಗಾರಿಕೆ, ಮೊಬೈಲ್ ಸರ್ವೀಸ್ ಸೆಂಟರ್, ಪಾತ್ರೆ ಅಂಗಡಿ, ದಿನಸಿ, ಆಹಾರ ಪಾರ್ಸೆಲ್ ನೀಡುವ ಹೋಟೆಲ್, ಬೇಕರಿ, ಪಾದರಕ್ಷೆ ಅಂಗಡಿಗಳು, ಗ್ಯಾರೇಜ್ಗಳು ತೆರೆದಿದ್ದವು. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ಮಾತ್ರ ಜನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಗರದೆಲ್ಲೆಡೆ ಜನರ ಓಡಾಟ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ ಸ್ಯಾನಿಟೈಸರ್ ಬಳಕೆ, ವ್ಯಕ್ತಿಗತ ಅಂತರ ನಿಯಮ ಪಾಲನೆ ಗಾಳಿಗೆ ತೂರಿದರೂ ಮಾಸ್ಕ್ ಧರಿಸುವುದನ್ನು ಮಾತ್ರ ಜನ ಮರೆಯಲಿಲ್ಲ.
ಕೈಗಾರಿಕೆಗಳು ಪುನರಾರಂಭ: ನಗರದ ಹೆಚ್ಚಿನ ಕೈಗಾರಿಕೆಗಳು ಕಾರ್ಯ ಆರಂಭಿಸಿವೆ. ಕಡಿಮೆ ಸಂಖ್ಯೆಯ ಕಾರ್ವಿುಕರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂತು. ಪೀಣ್ಯ ಕೈಗಾರಿಕಾ ಪ್ರದೇಶ ಸೇರಿ ಹಲವು ಕಾರ್ಖಾನೆಗಳ ಬಳಿ ಜನದಟ್ಟಣೆ ಕಂಡುಬಂದಿತ್ತು. ಎಲ್ಲ ಬಗೆಯ ಖಾಸಗಿ ಕಂಪನಿ ಕಚೇರಿ ತೆರೆದು, ಎಂದಿನಂತೆ ಕೆಲಸ ಪ್ರಾರಂಭಿಸಿದ್ದರೂ ಶೇ.33 ಸಿಬ್ಬಂದಿ ಕಚೇರಿಗೆ ಬಂದರೆ, ಇನ್ನುಳಿದ ನೌಕರರು ಮನೆಯಿಂದಲೇ ಕೆಲಸ ಮಾಡಿದರು.
ಚೆಕ್ಪೋಸ್ಟ್ಗಳ ತೆರವು
ನಗರದ ಅಲ್ಲಲ್ಲಿ ಅಳವಡಿಸಿದ್ದ ಬ್ಯಾರಿಕೇಡ್, ಚೆಕ್ಪೋಸ್ಟ್ಗಳನ್ನು ಹಾಗೂ ಏಕಮುಖ ಸಂಚಾರ ವ್ಯವಸ್ಥೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಲಾಕ್ಡೌನ್ ಬಳಿಕ ನಗರದ ಹಲವೆಡೆ ದ್ವಿಪಥ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ನಿರ್ಬಂಧ ಹೇರಿದ್ದ ಬಹುತೇಕ ರಸ್ತೆಗಳನ್ನು ಭಾನುವಾರ (ಮೇ 3) ಮಧ್ಯರಾತ್ರಿಯೇ ತೆರವುಗೊಳಿಸಲಾಗಿತ್ತು. ಅನಗತ್ಯವಾಗಿ ಸಂಚರಿಸುವ ತಪಾಸಣೆಗೆ ಹಾಗೂ ನಗರ ಬಿಟ್ಟು ಹೊರಹೋಗುವರ ಮೇಲೆ ನಿಗಾವಹಿಸಲು ಚೆಕ್ಪೋಸ್ಟ್ಗಳನ್ನು ನಿರ್ವಿುಸಲಾಗಿತ್ತು. ಈಗ ಎಲ್ಲ ಚೆಕ್ಪೋಸ್ಟ್ ಗಳನ್ನು ತೆಗೆಯಲಾಗಿದೆ.
ಮೇಲ್ಸೇತುವೆಗಳು ನಿರ್ಬಂಧಮುಕ್ತ
ಕರೊನಾ ಲಾಕ್ಡೌನ್ ಬಳಿಕ ನಗರದ ಮೇಲು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ನಾಯಂಡಹಳ್ಳಿ, ಸಿರ್ಸಿ ವೃತ್ತ- ಸರ್ ಕೆ.ಪಿ. ಪುರಭವನ, ಆನಂದ್ರಾವ್ ವೃತ್ತ, ಯಶವಂತಪುರ ಹಾಗೂ ಹೆಬ್ಬಾಳ ಸೇರಿ ಎಲ್ಲ ಕಡೆಗಳಲ್ಲಿ ಮೇಲುರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಟ್ರಾಫಿಕ್ ಸಿಗ್ನಲ್ಗಳ ಕಾರ್ಯಾರಂಭ
ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿರುವ ಮೊದಲ ದಿನವೇ ವಾಹನ ಸಂಚಾರ ಹೆಚ್ಚಾಗಿತ್ತು. ಇದರಿಂದ ನಗರದ ಕೆಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಕಳೆದ 42 ದಿನಗಳಿಂದ ಸ್ಥಗಿತಗೊಳಿಸಲಾಗಿದ್ದ ಸಿಗ್ನಲ್ ದೀಪಗಳು ಹೆಚ್ಚಿನ ಕಡೆ ಕಾರ್ಯಾರಂಭ ಮಾಡಿದವು. ಬೆಳಗಿನ ವೇಳೆ ಹಲವು ಸಿಗ್ನಲ್ಗಳಲ್ಲಿ ಬಳಿ ಕಾರು, ಆಟೋ, ದ್ವಿಚಕ್ರ ವಾಹನ ಸೇರಿ ಎಲ್ಲ ಬಗೆಯ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಮೆಜೆಸ್ಟಿಕ್, ಯಶವಂತಪುರ, ಪ್ಯಾಲೇಸ್ ರಸ್ತೆ, ಕೋರಮಂಗಲ, ಬಿಟಿಎಂ ಬಡಾವಣೆ, ಎಚ್ಎಸ್ಆರ್ ಲೇಔಟ್ ಪೀಣ್ಯ ಇಂಡಸ್ಟ್ರಿ, ಆನಂದರಾವ್ ವೃತ್ತ, ಪುರಭವನ, ಕೃ.ರಾ. ಮಾರುಕಟ್ಟೆ ಸೇರಿ ಎಲ್ಲ ಭಾಗಗಳಲ್ಲೂ ವಾಹನಗಳ ಓಡಾಟ ಹೆಚ್ಚಾಗಿತ್ತು. ಪ್ರತಿದಿನ ಪಾಸ್ ತೋರಿಸಲು ಹೇಳುತ್ತಿದ್ದ ಪೊಲೀಸರು ಸೋಮವಾರ ಪಾಸ್ ಪರಿಶೀಲಿಸದೇ ಎಲ್ಲ ವಾಹನಗಳಿಗೂ ಓಡಾಡಲು ಅವಕಾಶ ಕಲ್ಪಿಸಿದ್ದರು.
ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಕಣ್ಣು
ನಗರದ ಕೆಲ ಸೂಕ್ಷ್ಮ ಪ್ರದೇಶದಲ್ಲಿ ಜನಜಂಗುಳಿ ಹಾಗೂ ಅಹಿತಕರ ಪ್ರಕರಣ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಹೊಯ್ಸಳ ವಾಹನಗಳಲ್ಲಿ ಗಸ್ತು ನಡೆಸಿ ಜನರಿಗೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಕೆಲವೆಡೆ ಸಾರ್ವಜನಿಕರಿಗೆ ಸಲಹೆ ನೀಡಿದರು.
ವ್ಯಾಪಾರ ವಹಿವಾಟು ಹೆಚ್ಚಳ
ಒಂದೂವರೆ ತಿಂಗಳಿನಿಂದ ವ್ಯಾಪಾರವಿಲ್ಲದೆ ಕಡಿಮೆ ಬೆಲೆಗೆ ಹೂ, ಹಣ್ಣು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಲಾಕ್ಡೌನ್ ಸಡಿಲಿಕೆ ಕೊಂಚ ಸಮಾಧಾನ ತಂದಿದೆ. ಬಟ್ಟೆ, ಚಿನ್ನಾಭರಣ ಮಳಿಗೆ, ಪಾತ್ರೆ ಅಂಗಡಿ, ದಿನಸಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಎಂದಿ ಗಿಂತ ಕಡಿಮೆಯಿದ್ದರೂ, ವ್ಯಾಪಾರಕ್ಕೇನೂ ಕೊರತೆಯಾಗಿರಲಿಲ್ಲ. ಪೀಠೋಪಕರಣ ಗಳ ಅಂಗಡಿಗಳಿಗೂ ಎಂದಿನಂತೆ ಗ್ರಾಹಕರು ಭೇಟಿ ನೀಡುತ್ತಿರುವುದು ಕಂಡುಬಂತು.