ಮತ್ತೊಮ್ಮೆ ಬಿಜೆಪಿ ಶಕ್ತಿ ಕೇಂದ್ರವಾದ ಶಿವಮೊಗ್ಗ

BYY
Published on

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ನೇಮಕ ಆಗುವುದರೊಂದಿಗೆ ಮತ್ತೊಮ್ಮೆ ಶಿವಮೊಗ್ಗ ಜಿಲ್ಲೆ ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ. ಇದುವರೆಗೆ ಜಿಲ್ಲೆಯ ಮೂವರಿಗೆ ರಾಜ್ಯಾಧ್ಯಕ್ಷ ಸ್ಥಾನ ಒಲಿದಂತಾಗಿದೆ. ತಂದೆ ಅಲಂಕರಿಸಿದ್ದ ಸ್ಥಾನಕ್ಕೇರುವ ಮೂಲಕ ಬಿವೈವಿ ಹೊಸ ದಾಖಲೆ ನಿರ್ವಿುಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ದೀರ್ಘ ಕಾಲ ಸಂಘಟನೆಗೆ ಶಕ್ತಿ ತುಂಬಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದರು. ಇದೀಗ ರಾಜ್ಯದಲ್ಲಿ ಬಿಜೆಪಿ ಸಂಕಷ್ಟದ ಸ್ಥಿತಿಯಲ್ಲಿದ್ದು, ಬಿ.ವೈ.ವಿಜಯೇಂದ್ರಗೆ ಮಹತ್ತರ ಜವಾಬ್ದಾರಿ ನೀಡಿರುವುದರಿಂದ ಸಹಜವಾಗಿಯೇ ಜಿಲ್ಲೆಯ ಕಾರ್ಯಕರ್ತರಲ್ಲಿ ಉತ್ಸಾಹ ಹಾಗೂ ಕುತೂಹಲ ಮೂಡಿದೆ. ಬಿಎಸ್​ವೈ 1988ರಲ್ಲಿ ಮೊದಲ ಬಾರಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. 2010ರಲ್ಲಿ ಕೆ.ಎಸ್.ಈಶ್ವರಪ್ಪ ರಾಜ್ಯಾಧ್ಯಕ್ಷ ಜವಾಬ್ದಾರಿ ನಿರ್ವಹಣೆ ಮಾಡಿದ್ದರು. ಇದೀಗ ಮೂರನೆಯವರಾಗಿ ವಿಜ ಯೇಂದ್ರ ಹೊಣೆ ಹೊತ್ತಿದ್ದಾರೆ.

ಬಿ.ವೈ.ವಿಜಯೇಂದ್ರ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರಿಗೆ ಯಾವ ಕೆಲಸ ಕೊಟ್ಟರೂ ಅದನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯವಿದೆ. ನಮ್ಮ ಪಕ್ಷದ ಹಿರಿಯ ಮುಖಂಡರು ಕಳೆದ ಕೆಲವು ವರ್ಷಗಳಿಂದ ಅವರ ಕಾರ್ಯಶೈಲಿ ಮತ್ತು ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯುವ ಗುಣವನ್ನು ಗಮನಿಸಿ ಈ ಜವಾಬ್ದಾರಿ ನೀಡಿದ್ದಾರೆ. | ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ

ತಂದೆಯ ಗರಡಿಯಲ್ಲಿ ಪಳಗಿದ ಮಗ

ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಏರಿಳಿತ, ರಾಜಕೀಯದ ಬಿಗಿಪಟ್ಟುಗಳು, ತಂತ್ರಗಾರಿಕೆ ಎಲ್ಲವನ್ನೂ ಸನಿಹದಿಂದ ಕಂಡವರು ಬಿ.ವೈ. ವಿಜಯೇಂದ್ರ. ಅದರಲ್ಲೂ ಬಿಎಸ್​ವೈ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಆಡಳಿತ ವೈಖರಿಯಿಂದ ರಾಜಕೀಯವನ್ನು ಕರಗತ ಮಾಡಿಕೊಂಡಿದ್ದಾರೆ. 1975ರಲ್ಲಿ ಜನಿಸಿದ ವಿಜಯೇಂದ್ರ ಶಿಕಾರಿಪುರದಲ್ಲಿ ಪ್ರಾಥಮಿಕ ಶಿಕ್ಷಣ, ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದು, ಬಿಎ, ಎಲ್​ಎಲ್​ಬಿ ಪದವೀಧರರಾಗಿದ್ದಾರೆ. ಹಲವು ಚುನಾವಣೆಗಳಲ್ಲಿ ತಂದೆ ಪರ ಪ್ರಚಾರ ನಡೆಸಿದ್ದು ಬಿಟ್ಟರೆ ಅಷ್ಟಾಗಿ ರಾಜಕೀಯದಲ್ಲಿ ಸಕ್ರಿಯರಾಗಿರಲಿಲ್ಲ. ಆದರೆ 2018-19ರ ವೇಳೆಗೆ ಬಿಜೆಪಿ ರಾಜ್ಯ ಯುವಮೋರ್ಚಾ ಅಧ್ಯಕ್ಷರಾಗಿ, ಬಳಿಕ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ರಾಜಕೀಯದಲ್ಲಿ ಪ್ರಬಲ ಹೆಜ್ಜೆ ಮೂಡಿಸತೊಡಗಿದರು. ಶಿರಾ ಹಾಗೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ವಿಜಯೇಂದ್ರ ಗೆಲ್ಲಿಸಿಕೊಂಡು ಬಂದರು. ಇದು ಅವರ ರಾಜಕೀಯ ಗ್ರಾಫ್ ಏರಲು ಕಾರಣವಾಯಿತು. ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿಯಿಂದ ತೆರವಾದ ಶಿಕಾರಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಕಂಡ ವಿಜಯೇಂದ್ರಗೆ ಇದೀಗ ರಾಜ್ಯಾಧ್ಯಕ್ಷ ಸ್ಥಾನವೂ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net