

ಬೆಂಗಳೂರು: ಭಾರತ ಆಹಾರ ನಿಗಮ (ಎಫ್ ಸಿಐ)ದ ಅಕ್ಕಿಗಾಗಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮೊರೆಯಿಡಲು ಇಷ್ಟರಲ್ಲೇ ದೆಹಲಿಗೆ ಹೋಗುವೆ ಎಂದು ಆಹಾದ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಹಸಿರು ಕ್ರಾಂತಿಯ ಹರಿಕಾರ,ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ್ ರಾಂ ರವರ 38 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಜತೆಗೆ ಶನಿವಾರ ಭಾಗವಹಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಅತಿ ಶೀಘ್ರದಲ್ಲಿ ಭೇಟಿ ಮಾಡಿ ರಾಜ್ಯಕ್ಕೆ ಅಕ್ಕಿ ವಿತರಿಸಲು ಪ್ರಸ್ತಾವನೆಯನ್ನು ಸಲ್ಲಿಸಿ, ಎಫ್ ಸಿಐ ವಿಧಿಸುವ ದರಕ್ಕೆ ಪೂರೈಸಲು ಮನವಿ ಮಾಡುವೆ ಎಂದು ಹೇಳಿದರು.
ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಭಾರತ್ ರೈಸ್ ಅನ್ನು ಕೆಜಿಗೆ 29 ದರದಲ್ಲಿ ವಿತರಿಸಿದರ. ಅದು ಚುನಾವಣೆಯ ಗಿಮಿಕ್ ಆಗಿ ವಿತರಿಸಿ ಈಗ ಬಂದ್ ಮಾಡಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಡವರ ಪರವಾಗಿಲ್ಲ. ಶ್ರೀಮಂತರ ಪರ ಎನ್ನುವುದು ದೃಢಪಟ್ಟಿದೆ ಎಂದು ಕೆ.ಎಚ್.ಮುನಿಯಪ್ಪ ವ್ಯಂಗ್ಯವಾಡಿದರು.