

| ರಾಘವ ಶರ್ಮ ನಿಡ್ಲೆ ನವದೆಹಲಿ
ಕಾವೇರಿ ಮತ್ತು ಅರ್ಕಾವತಿ ನದಿ ಸಂಗಮ ಪ್ರದೇಶದಿಂದ 2-3 ಕಿಮೀ ದೂರದಲ್ಲಿ ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಕುಡಿಯುವ ನೀರು ಮತ್ತು ಜಲ ವಿದ್ಯುತ್ ಯೋಜನೆಗೆ ಮತ್ತೆ ಗ್ರಹಣ ಬಡಿಯುವ ಆತಂಕ ಎದುರಾಗಿದೆ. ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮೋದನೆ ಅತ್ಯಗತ್ಯವಾಗಿದ್ದು, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ಮೇಕೆದಾಟು ವಿಚಾರ ಪ್ರಾಧಿಕಾರದ ಸಭೆಯಲ್ಲಿ ಚರ್ಚೆಯಾಗಬಾರದು ಎಂದು ಪಟ್ಟು ಹಿಡಿದಿವೆ. ಕೆಲ ದಿನಗಳ ಹಿಂದಷ್ಟೇ ಲೋಕಸಭೆಯಲ್ಲಿ ಯೋಜನೆ ವಿಚಾರ ಪ್ರಸ್ತಾಪವಾಗಿದ್ದ ವೇಳೆ, ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಮ್ಮತಿ ಬೇಕು ಎಂದು ಜಲಶಕ್ತಿ ಸಚಿವರು ಹೇಳಿದ್ದರು. ಹೀಗಾಗಿ, ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮೇಕೆದಾಟು ವಿಚಾರ ಕೈಗೆತ್ತಿಕೊಳ್ಳುವ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರನ್ನು ಒಪ್ಪಿಸಲು ಸಿಎಂ ಬೊಮ್ಮಾಯಿ ಕೂಡ ದಿಲ್ಲಿ ಪ್ರವಾಸದ ವೇಳೆ ಯಶಸ್ವಿಯಾಗಿದ್ದರು.
ಅಂತೆಯೇ, ಸೋಮವಾರ ನವದೆಹಲಿಯ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಾಧಿಕಾರದ ಸಭೆಯ ಮುಖ್ಯ ಕಾರ್ಯಸೂಚಿ ಕರ್ನಾಟಕದ ಮೇಕೆದಾಟು ಯೋಜನೆ ಆಗಿತ್ತು. ಆದರೆ, ತ.ನಾಡು ಮತ್ತು ಪುದುಚೇರಿ ರಾಜ್ಯಗಳ ತೀವ್ರ ವಿರೋಧದಿಂದಾಗಿ ಚರ್ಚೆಯನ್ನು ಮುಂದೂಡಲಾಗಿದೆ. ಸೆ.24ರಂದು ನಡೆಯುವ ಸಭೆಯಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಜಲ ಆಯೋಗ ಮತ್ತು ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಸ್.ಕೆ. ಹಲ್ದಾರ್ ಹೇಳಿದ್ದಾರೆ. ಅಲ್ಲದೆ, ಯೋಜನೆಗೆ ಕಣಿವೆ ರಾಜ್ಯಗಳ ಸಹಮತಿ ಅನಿವಾರ್ಯ ಎಂದೂ ಪ್ರಾಧಿಕಾರದ ಅಧ್ಯಕ್ಷರು ಸ್ಪಷ್ಟಪಡಿಸಿರುವುದು ರಾಜ್ಯದ ಮಟ್ಟಿಗೆ ಸ್ವಾಗತಾರ್ಹ ಬೆಳವಣಿಗೆಯೇನಲ್ಲ. ಕಾವೇರಿ ನಿರ್ವಹಣಾ ಪ್ರಾಧಿಕಾರ ರಾಜ್ಯದ ಪರ ನಿಲುವು ತಾಳಲು ಸಾಧ್ಯವೇ ಎಂಬ ಪ್ರಶ್ನೆ ಜಲ ತಜ್ಞರನ್ನು ಕಾಡುತ್ತಿದೆ. ಕೇಂದ್ರ ಸರ್ಕಾರ ಕೂಡ ತ.ನಾಡು, ಪುದುಚೇರಿ ಅಭಿಪ್ರಾಯಗಳನ್ನು ಬದಿಗೆ ಸರಿಸಿ, ಕರ್ನಾಟಕದ ಪರ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಕೋರ್ಟ್ ಪರಿಹಾರವೂ ಸುಲಭದ್ದಲ್ಲ: ಮೇಕೆದಾಟು ಯೋಜನೆ ಪ್ರಶ್ನಿಸಿ ಈಗಾಗಲೇ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕದ ಮೇಕೆದಾಟು ಸಮಗ್ರ ಯೋಜನಾ ವರದಿಗೆ ಸಮ್ಮತಿಸಬಾರದು ಎಂದು ಕೇಂದ್ರ ಪರಿಸರ, ಅರಣ್ಯ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್ಗೆ ಒತ್ತಾಯಿಸಿದೆ. ಒಂದು ವೇಳೆ ಕೋರ್ಟ್ನನಲ್ಲಿ ಕರ್ನಾಟಕಕ್ಕೆ ಸಣ್ಣಮಟ್ಟಿನ ಹಿನ್ನಡೆಯಾದರೂ ಯೋಜನೆ ಕೈಬಿಡಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ಹೀಗಾಗಿ, ಕೇಂದ್ರ ಸರ್ಕಾರದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂದು ಸರ್ಕಾರ-ಕಾನೂನು ತಂಡದ ವಲಯದಲ್ಲಿ ಚರ್ಚೆಯಾಗಿದೆ.
ನೀರು ಹರಿಸಲು ರಾಜ್ಯಕ್ಕೆ ಸೂಚನೆ: ಪ್ರತಿ ಜಲವರ್ಷದ ಜೂನ್, ಜುಲೈ, ಆಗಸ್ಟ್ ನಲ್ಲಿ ಕಾವೇರಿ ನದಿಯಿಂದ ತಮಿಳುನಾಡಿಗೆ ಕರ್ನಾಟಕ ಒಟ್ಟು 86 ಟಿಎಂಸಿ ನೀರು ಹರಿಸಬೇಕು. ಆಗಸ್ಟ್ ಅಂತ್ಯಕ್ಕೆ ಈವರೆಗೆ 55-56 ಟಿಎಂಸಿ ನೀರು ಹರಿದಿದೆ. ಬಾಕಿ ನೀರನ್ನು ಕರ್ನಾಟಕ ಇನ್ನೂ ಹರಿಸಿಲ್ಲ ಎಂದು ತಮಿಳು ನಾಡು ಪ್ರಾಧಿಕಾರದ ಗಮನಸೆಳೆದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಲ್ಲಿ ಹೆಚ್ಚುವರಿಯಾಗಿ 6-7 ಟಿಎಂಸಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸಲಾಗಿದೆ.
ಪ್ರಮಾಣ ತಗ್ಗಿಸುವುದೇ?: ಅಂದಾಜು 67 ಟಿಎಂಸಿ ನೀರನ್ನು ಮೇಕೆದಾಟು ಜಲಾಶಯದಲ್ಲಿ ಸಂಗ್ರಹ ಮಾಡಿ ಅದನ್ನು ಕುಡಿಯಲು ಹಾಗೂ ಜಲ ವಿದ್ಯುತ್ ಯೋಜನೆಗೆ ಬಳಸಿಕೊಳ್ಳಬೇಕು ಎನ್ನುವುದು ರಾಜ್ಯದ ಉದ್ದೇಶ. ಇಷ್ಟೊಂದು ಪ್ರಮಾಣದ ನೀರಿನ ಶೇಖರಣೆಗೆ ತ.ನಾಡು ಸುತಾರಾಂ ಒಪ್ಪದು. ಹೀಗಾಗಿ, ನೀರಿನ ಪ್ರಮಾಣ ತಗ್ಗಿಸಿ 25-30 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ವಣಕ್ಕೆ ಕೇಂದ್ರದಿಂದ ಒಪ್ಪಿಗೆ ಪಡೆದುಕೊಳ್ಳಲು ಕರ್ನಾಟಕ ಯತ್ನಿಸಬೇಕು ಎಂದು ರಾಜ್ಯದ ಜಲ-ಕಾನೂನು ತಜ್ಞರೊಬ್ಬರು ವಿಜಯವಾಣಿ ತಿಳಿಸಿದ್ದಾರೆ. ನಮ್ಮದು ಕುಡಿಯುವ ನೀರಿನ ಯೋಜನೆ, 25-30 ಟಿಎಂಸಿ ಸಂಗ್ರಹಿಸಿ ಸಮಸ್ಯೆ ಪರಿಹರಿಸಲು ಬಳಸಿ ಕೊಳ್ಳುತ್ತೇವೆ ಎಂದು ಕೇಂದ್ರವನ್ನು ಮನವೊಲಿಸಬೇಕು ಅಥವಾ ಕೇಂದ್ರದಿಂದಲೇ ಇಂಥದ್ದೊಂದು ಸಲಹೆ ಬರುವಂತೆ ನೋಡಿಕೊಳ್ಳಬೇಕು. ಕೇಂದ್ರ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳೇ ಇರುವುದರಿಂದ ರಾಜಕೀಯ ಮಾರ್ಗದಲ್ಲೇ ಪರಿಹಾರ ಕಂಡುಕೊಳ್ಳುವುದೇ ಸೂಕ್ತ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಜಲಾಶಯಗಳಿಗೆ ಒಳಹರಿವು ಕಡಿಮೆ ಇದೆ. 27.987 ಟಿಎಂಸಿ ನೀರು ಕೊರತೆ ಇದೆ. ಹೀಗಾಗಿ ತಮಿಳು ನಾಡಿನವರು ಕೇಳಿದಷ್ಟು ನೀರು ಕೊಡುವುದು ಕಷ್ಟಸಾಧ್ಯ. ಒಳಹರಿವನ್ನು ನೋಡಿಕೊಂಡು ನಾವು ನೀರು ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
| ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವ
ಮೇಕೆದಾಟು ಯೋಜನೆ ಬಗ್ಗೆ ಕಣಿವೆ ರಾಜ್ಯಗಳೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಯೋಜನೆಗೆ ತಮಿಳು ನಾಡು, ಪುದು ಚೇರಿ, ಕೇರಳ ರಾಜ್ಯಗಳ ಸಹಮತಿ ಕೂಡ ಇರಬೇಕು.
| ಎಸ್.ಕೆ. ಹಲ್ದಾರ್ ಅಧ್ಯಕ್ಷರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ