

ಚೀನಾ: ಕೋವಿಡ್ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಚೀನಾದ ಆರ್ಥಿಕ ರಾಜಧಾನಿ ಶಾಂಘೈ ನಗರದಲ್ಲಿ ಸೋಮವಾರ ಲಾಕ್ಡೌನ್ ಆರಂಭವಾಗಿದ್ದು ಇದು ಎರಡು ವರ್ಷಗಳಲ್ಲೇ ಚೀನಾದ ಅತಿ ದೊಡ್ಡ ಲಾಕ್ಡೌನ್ ಆಗಿದೆ. ಸಾಮೂಹಿಕ ಟೆಸ್ಟಿಂಗ್ ನಡೆಸಲು ಹಾಗೂ ಸೋಂಕನ್ನು ನಿಯಂತ್ರಿಸಲು ಭಾರಿ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗವಂತೆ ಲಾಕ್ಡೌನ್ ವಿಧಿಸಲಾಗಿದೆ. ಚೀನಾದಲ್ಲಿ ಸೋಂಕು ಅಬ್ಬರಿಸುತ್ತಿರುವುದರಿಂದ ಭಾರತದಲ್ಲಿ ನಾಲ್ಕನೇ ಅಲೆ ಉಂಟಾಗಬಹುದೇ ಎಂಬ ಆತಂಕ ಎದುರಾಗಿದೆ.
ದಕ್ಷಿಣ ಕೊರಿಯಾದಲ್ಲಿ ಏರಿಕೆ: ದಕ್ಷಿಣ ಕೊರಿಯಾದಲ್ಲಿ ಸೋಂಕಿನ ದೈನಿಕ ಸರಾಸರಿ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ ಒಮಿಕ್ರಾನ್ ತಳಿಯಿಂದ ಗಂಭೀರ ಸೋಂಕು ತಗಲುತ್ತಿರುವುದು ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಕಳೆದ ವಾರ ದೇಶದಲ್ಲಿ ಸುಮಾರು 3,50,000 ಹೊಸ ಪ್ರಕರಣಗಳು ದೃಢಪಟ್ಟಿದ್ದವು.