ಮತ್ತೆ ನೆರೆ ಭೀತಿ ಕಣ್ತೆರೆಯುತ್ತಾ ಸರ್ಕಾರ?

ಋಅಇನ
Published on

ಬೆಂಗಳೂರು: ಬೇಸಿಗೆ ತಾಪ ಇಳಿದು ರಾಜ್ಯದ ಹಲವೆಡೆ ಮಳೆಯ ಸಿಂಚನ ಶುರುವಾಗಿರುವ ಸಂದರ್ಭದಲ್ಲೇ ಕಳೆದ ವರ್ಷ ನೆರೆ ಹಾವಳಿಗೆ ಸಿಲುಕಿ ತತ್ತರಿಸಿದ್ದವರ ಎದೆಯಲ್ಲಿ ಮತ್ತೆ ನಡುಕ ಶುರುವಾಗಿದೆ. ಕರೊನಾ ಮಹಾಮಾರಿ ವಿರುದ್ಧ ಸಮರ, ಆರ್ಥಿಕತೆ ಚೇತರಿಕೆ ಸವಾಲು ಎದುರಿಸುವ ಕಾರ್ಯದಲ್ಲಿ ಸಂಪೂರ್ಣ ಮುಳುಗಿರುವ ಸರ್ಕಾರ ‘ನೆರೆ ಬರೆ’ ಮರೆತಿರುವುದರಿಂದ ಮತ್ತೆ ನೆರೆ ಬಂದರೆ ಗತಿಯೇನೆಂಬ ಆತಂಕ ಜನರನ್ನು ಕಾಡಲಾರಂಭಿಸಿದೆ.

ನದಿ ನೀರು ಹಂಚಿಕೆ, ಕೊಡುಕೊಳ್ಳುವಿಕೆಗೆ ಸಂಬಂಧಿಸಿದ ಒಡಂಬಡಿಕೆ ಇನ್ನೂ ಪ್ರಸ್ತಾವನೆ ಕಡತದಲ್ಲೇ ಕೊಳೆಯುತ್ತಿದೆ. ಬೆಳಗಾವಿ ಸೇರಿ ನೆರೆಪೀಡಿತ ಪ್ರದೇಶಗಳ ಜನರಿಗೆ ಸರ್ಕಾರ ಘೊಷಿಸಿದ್ದ ಭರವಸೆಗಳ ಪೈಕಿ ಬಹುತೇಕ ಭರವಸೆಯಾಗಿಯೇ ಉಳಿದಿವೆ. ಈ ಸಂಕಷ್ಟದಲ್ಲಿ ನೆರೆಯಲ್ಲಿ ಕೊಚ್ಚಿ ಹೋದ ಬದುಕು ಕಟ್ಟಿಕೊಳ್ಳುವ ಸಂತ್ರಸ್ತರ ಪ್ರಯತ್ನ ಮುಂದುವರಿದಿದೆ. ಈಗಾಗಲೇ ಕೃಷ್ಣಾ, ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿದ್ದು, ಮುಂಗಾರು ಆಗಮನದ ಬಳಿಕ ಪರಿಸ್ಥಿತಿ ಇನ್ನಷ್ಟು ಗಂಭೀರಗೊಳ್ಳಬಹುದೆಂಬ ಅನುಮಾನ ಕಾಡುತ್ತಿದೆ.

ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಮಹಾರಾಷ್ಟ್ರ ಸರ್ಕಾರ ಕೊಯ್ನಾ ನದಿಯಿಂದ ಬಿಡುವ ನೀರಿಗೆ ಪ್ರತಿಯಾಗಿ 2004ರಿಂದ 2014-15ರವರೆಗೆ ರಾಜ್ಯ ಸರ್ಕಾರ ಸುಮಾರು 20 ಕೋಟಿ ರೂ.ಗಳನ್ನು ಪಾವತಿಸಿದೆ. ಆದರೀಗ ಹಣ ಬೇಡ ಎಂಬ ತಂಟೆ ತೆಗೆದಿರುವ ಮಹಾರಾಷ್ಟ್ರ ನೀರಿಗೆ ನೀರೇ ಕೊಡಿ ಎಂಬ ಬೇಡಿಕೆ ಇಟ್ಟಿದೆ. ಇದೇ ಈಗ ನೆರೆ ನಿರ್ವಹಣಾ ಸಮಿತಿ ರಚನೆ ಸೇರಿ ಇತರ ನಿರ್ಧಾರಗಳಿಗೂ ಅಡ್ಡಗಾಲಾಗಿದೆ. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಜತ್ತಕ್ಕೆ ಕುಡಿಯುವ ನೀರು ಕೊಡುವಂತೆ ಮಹಾರಾಷ್ಟ್ರ ಬೇಡಿಕೆ ಇಟ್ಟಿದೆ. ಹಂಚಿಕೆಯಾದ ಈ ನೀರನ್ನು ಬಿಡಲು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ಉಭಯ ರಾಜ್ಯಗಳ ಮಾತುಕತೆಗೆ ಮುಳ್ಳಾಗಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೆರೆ ನಿರ್ವಹಣಾ ಸಮಿತಿ ರಚನೆ, ನೀರು ಹಂಚಿಕೆಯ ಒಡಂಬಡಿಕೆ ವಿಚಾರವಾಗಿ ಉಭಯ ರಾಜ್ಯಗಳ ಸಭೆ ನಡೆಸುವುದಾಗಿ ಹೇಳಿದ್ದಾರೆ. ಆದರೆ ಮಳೆಗಾಲ ಬಂದು ಮೈಮೇಲೆ ನಿಂತಿದ್ದರೂ ಈ ನಿಟ್ಟಿನಲ್ಲಿ ಏನೊಂದೂ ಆಗಿಲ್ಲ ಎಂಬುದು ನೆರೆ ಸಂತ್ರಸ್ತರ ಅಳಲು.

ಪರಿಶೀಲನೆಗೆ ಹಿಂದೇಟು

ಮಹಾರಾಷ್ಟ್ರ ಸರ್ಕಾರದ ಉನ್ನತ ಅಧಿಕಾರಿಗಳ ತಂಡ ಮುನ್ನೆಚ್ಚರಿಕೆ ಕ್ರಮವಾಗಿ ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಆದರೆ, ನೆರೆಗೆ ನೇರ ಕಾರಣವಾದ ಕೊಯ್ನಾ, ವರ್ನಾ ನದಿಗಳತ್ತ ನಮ್ಮ ಅಧಿಕಾರಿಗಳು ಈವರೆಗೂ ಸುಳಿದಿಲ್ಲ. ಸಂಭವನೀಯ ಅನಾಹುತದ ಬಗ್ಗೆ ಅಧ್ಯಯನ ಕೂಡ ನಡೆಸಿಲ್ಲ.

ಸರ್ಕಾರ ಏನೇ ಒಡಂಬಡಿಕೆ ಮಾಡಿಕೊಳ್ಳಲಿ,ಯಾವುದೇ ಸಮಿತಿ ರಚಿಸಲಿ. ನಮ್ಮ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಆಗಬಾರದು. ಅಂತಹ ಸನ್ನಿವೇಶ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧ. | ಅಶೋಕ ಚಂದರಗಿ ಸಾಮಾಜಿಕ ಹೋರಾಟಗಾರ.

ಮರೆಯದ ಮಹಾಘಾತ

2019ರಲ್ಲಿ ಅತಿವೃಷ್ಟಿಯಿಂದಾಗಿ ರಾಜ್ಯದ 15 ಜಿಲ್ಲೆಗಳಲ್ಲಿ ಗಂಭೀರ ಪರಿಸ್ಥಿತಿ ತಲೆದೋರಿತ್ತು. 240ಕ್ಕೂ ಹೆಚ್ಚು ಗ್ರಾಮ ಜಲಾವೃತವಾದ ಪರಿಣಾಮ ನೂರಾರು ಕುಟುಂಬಗಳು ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದವು. ಬೆಳಗಾವಿ ಜಿಲ್ಲೆಯೊಂದರಲ್ಲೇ 11 ಸಾವಿರ ಕೋಟಿ ರೂ. ನಷ್ಟ ಸೇರಿ ರಾಜ್ಯಾದ್ಯಂತ 38 ಸಾವಿರ ಕೋಟಿ ರೂ. ಬೆಳೆ, ಆಸ್ತಿ-ಪಾಸ್ತಿ ಹಾನಿಗೀಡಾಗಿತ್ತು. ನೂರಾರು ಪ್ರಾಣಿಗಳು, ಹತ್ತಾರು ಜನರ ಜೀವಹಾನಿಯೂ ಆಗಿತ್ತು. ನೆರೆ ನಿಂತು ವರ್ಷ ಉರುಳಿದರೂ ಸಂತ್ರಸ್ತರ ಬದುಕು ಅತಂತ್ರವಾಗಿಯೇ ಉಳಿದಿದೆ.

ಆಗಬೇಕಿರುವುದೇನು?

  • ಮಹಾರಾಷ್ಟ್ರ ಜತೆಗಿನ ಒಡಂಬಡಿಕೆ
  • ನೆರೆಪೀಡಿತರಿಗೆ ನೀಡಿದ್ದ ಭರವಸೆಗಳು
  • ಜಲಾಶಯಗಳತ್ತ ಸುಳಿಯದ ಅಧಿಕಾರಿಗಳು, ಸಂಭವನೀಯ ಅನಾಹುತದ ಅಧ್ಯಯನ

ಮಹಾರಾಷ್ಟ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು, ಪತ್ರ ಕೂಡ ಬಂದಿದೆ. ರಾಜ್ಯಕ್ಕೆ ಒಳ್ಳೆಯದಾಗುವ ನಿರೀಕ್ಷೆಯಿದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಉನ್ನತಾಧಿಕಾರಿಗಳ ಸಭೆ ಕರೆದು ರ್ಚಚಿಸಿ ಆ ರಾಜ್ಯದೊಂದಿಗೆ ಮಾತುಕತೆ ನಡೆಸುತ್ತೇವೆ. | ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ

| ವಿಲಾಸ ಮೇಲಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net