ಮತ್ತೆ ಕೋವಿಡ್ ನಿರ್ಬಂಧ: ಶಾಲೆ, ಜಿಮ್​, ಕ್ಲಬ್, ಪಾರ್ಟಿಹಾಲ್​, ಈಜುಕೊಳ ಬಂದ್​; ಬಾರ್-ರೆಸ್ಟೋರೆಂಟ್​, ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ. 50 ಆಸನ ಭರ್ತಿಗಷ್ಟೇ ಅವಕಾಶ

Corona
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ಪಸರಿಸುವ ವೇಗ ವಿಪರೀತವಾಗಿದ್ದು, ಸರ್ಕಾರ ಅನಿವಾರ್ಯವಾಗಿ ಕಠಿಣ ನಿಯಮಗಳನ್ನು ಹೇರಲು ನಿರ್ಧರಿಸಿ ಮಾರ್ಗಸೂಚಿ ಹೊರಡಿಸಿದೆ. ಶಾಲೆಗಳು ಪುನಃ ಬಾಗಿಲು ಮುಚ್ಚಲಿದ್ದು, ಯಾವುದೇ ತರಹದ ರ‌್ಯಾಲಿ, ಮುಷ್ಕರ, ಧರಣಿ ನಿಷೇಧಿಸಲಾಗಿದೆ. ಜತೆಗೆ ಜಿಮ್, ಈಜುಕೊಳವನ್ನೂ ಸಹ ಮುಚ್ಚಲು ಆದೇಶ ಹೊರಡಿಸಲಾಗಿದೆ.

ಪ್ರಕರಣ ವ್ಯಾಪಕವಾಗಿರುವ ಬೆಂಗಳೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಚಿತ್ರಮಂದಿರದ ಪ್ರೇಕ್ಷಕರ ಸಂಖ್ಯೆಯನ್ನು ಶೇ.50ಕ್ಕೆ ಮಿತಿಗೊಳಿಸಿದ್ದು, ಹೋಟೆಲ್‌ಗಳಿಗೂ ಸಹ ಮಿತಿಹಾಕಲಾಗಿದೆ. ಯುಗಾದಿ ಬಳಿಕ ನಡೆಯುವ ಸಾಲು ಸಾಲು ಹಬ್ಬ, ಜಾತ್ರೆಗಳು, ಸಭೆ ಸಮಾರಂಭಗಳಿಗೆ ಈಗ ಕರೊನಾ ಗ್ರಹಣ ಬಾಧಿಸುವುದು ನಿಚ್ಚಳವಾಗಿದೆ. ಶುಕ್ರವಾರ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರದ ಮುಖ್ಯಕಾರ್ಯದರ್ಶಿ, ನಿಯಮ ಪಾಲನೆಯ ಅನಿವಾರ್ಯತೆಯನ್ನು ಗಂಭೀರ ದನಿಯಲ್ಲಿ ಪ್ರಸ್ತಾಪಿಸಿದ್ದಾರೆ. ನಿಯಮಗಳನ್ನು ಯಾವುದೇ ವ್ಯಕ್ತಿ ಉಲ್ಲಂಸಿದ ಪಕ್ಷದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಐಪಿಸಿ ಸೆಕ್ಷನ್ 188ರಂತೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರಂತೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳ ಗಮನಕ್ಕೆ

  • ವಿದ್ಯಾಗಮ ಸೇರಿದಂತೆ 6ರಿಂದ 9ನೇ ತರಗತಿ ಸ್ಥಗಿತ. 10, 11 ಹಾಗೂ 12ನೇ ತರಗತಿಗಳು ಪ್ರಸ್ತುತ ಇರುವಂತೆಯೇ ಮುಂದುವರೆಯುತ್ತವೆ. ಆದಾಗ್ಯೂ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ.
  • ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ತರಗತಿಗಳಲ್ಲಿ ಮಂಡಳಿಯ ಅಥವಾ ವಿಶ್ವವಿದ್ಯಾಲಯಗಳ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿ ಹೊರತುಪಡಿಸಿ ಇತರ ಎಲ್ಲಾ ತರಗತಿ ಸ್ಥಗಿತ.
  • ವಸತಿ ಶಾಲೆಗಳು ಹಾಗೂ ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11 ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳ ವಿಶ್ವವಿದ್ಯಾಲಯಗಳ ಪರೀಕ್ಷೆ ಬರೆಯುವವರು, ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ ಇತರ ಎಲ್ಲಾ ತರಗತಿ ಸ್ಥಗಿತ.

ಇವು ಕಡ್ಡಾಯ ಬಂದ್

  • ಎಲ್ಲಾ ಜಿಮ್‌ಗಳು ಹಾಗೂ ಈಜುಕೊಳಗಳು ಬಂದ್. ಅಪಾರ್ಟ್‌ಮೆಂಟ್- ಕಾಂಪ್ಲೆಕ್ಸ್‌ಗಳಲ್ಲಿನ ಜಿಮ್, ಪಾರ್ಟಿ ಹಾಲ್, ಕ್ಲಬ್ ಹೌಸ್, ಈಜುಕೊಳವೂ ಬಂದ್.
  • ಯಾವುದೇ ತರಹದ ರ‌್ಯಾಲಿ, ಮುಷ್ಕರ, ಧರಣಿ ನಿಷೇಧಿಸಲಾಗಿದೆ.
  • ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಜಾತ್ರೆ ಮಹೋತ್ಸವಗಳು, ಮೇಳಗಳು, ಗುಂಪು ಸೇರುವುದರ ನಿಷೇಧ ಮುಂದುವರೆಯುತ್ತದೆ.

ಇತಿಮಿತಿ ಯಾವುದಕ್ಕೆ?

  • ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ, ಆದರೆ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ.
  • ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗದಿಪಡಿಸಿರುವ ಆಸನದ ವ್ಯವಸ್ಥೆ ಮೀರುವಂತಿಲ್ಲ.
  • ವಿವಿಧ ಸಭೆ, ಸಮಾರಂಭ ಆಚರಣೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬಹುದಾದ ಸಾರ್ವಜನಿಕರ ಸಂಖ್ಯೆಯನ್ನು ಮಾ.12ರಂದು ಹೊರಡಿಸಿರುವ ಸುತ್ತೋಲೆ ಪ್ರಕಾರ ಮುಂದುವರಿಸಲಾಗಿದೆ.

ಸಿನಿಮಾ-ಪಬ್‌ಗೆ ಶೇ.50ಕ್ಕಷ್ಟೇ ಅವಕಾಶ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳ ಸಿನಿಮಾ ಹಾಲ್‌ಗಳಲ್ಲಿ ಪರ್ಯಾಯ ಆಸನಗಳಲ್ಲಿ ಕೂರುವಂತೆ (ಒಂದು ಸೀಟು ಮತ್ತೊಂದು ಸೀಟಲ್ಲಿ ಕುಳಿತುಕೊಳ್ಳುವಂತೆ) ಗರಿಷ್ಠ ಶೇ.50 ವೀಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇದೇ ಜಿಲ್ಲೆಗಳ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆಯು ಶೇ.50ರಷ್ಟು ಮೀರುವಂತಿಲ್ಲ.

ಕಡೆಗಣಿಸಿದರೆ ಅನಿರ್ದಿಷ್ಟ ಅವಧಿಗೆ ಕ್ಲೋಸ್

ಕರೊನಾ ಕುರಿತ ಮುನ್ನೆಚ್ಚರಿಕೆಗಾಗಿ ಸೂಕ್ತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಮುಖಗವಸು, ದೈಹಿಕ ಅಂತರ ಪಾಲನೆ, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಷ್‌ಗಳ ಬಳಕೆಯನ್ನು ಜಾರಿಗೊಳಿಸಬೇಕಾದ್ದು ಸಂಬಂಧಪಟ್ಟವರ ಜವಾಬ್ದಾರಿ. ಈ ನಿಯಮ ಉಲ್ಲಂಸಿದ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್‌ಗಳನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಮುಚ್ಚಲಾಗುತ್ತದೆ. ಶಾಪಿಂಗ್ ಮಾಲ್‌ಗಳು, ಮುಚ್ಚಿದ ಪ್ರದೇಶಗಳಲ್ಲಿರುವ ಮಾರುಕಟ್ಟೆಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಲ್ಲೂ ನಿಯಮ ಉಲ್ಲಂಘಿಸಿದರೆ ಸಾಂಕ್ರಾಮಿಕ ಕೊನೆಗೊಳ್ಳುವವರೆಗೆ ಮುಚ್ಚಲಾಗುತ್ತದೆ.

ಮಾರ್ಗಸೂಚಿಯ ಪೂರ್ಣ ವಿವರ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net