

ಮುಂಬೈ: ಈ ಮಹಾನಗರದಲ್ಲಿ ಎತ್ತರದ ಕಟ್ಟಡಗಳಲ್ಲಿ ವಾಸಿಸುವವರಿಗಿಂತ ಕೊಳೆಗೇರಿ ನಿವಾಸಿಗಳೇ ಹೆಚ್ಚಿನ ನಾಗರಿಕ ಪ್ರಜ್ಞೆ ಹೊಂದಿದ್ದಾರೆ. - ಹೀಗೊಂದು ಅಭಿಪ್ರಾಯವನ್ನು ಜವಾಬ್ದಾರಿಯುತ ಜನಪ್ರತಿನಿಧಿಯೊಬ್ಬರು ವ್ಯಕ್ತಪಡಿಸಿದ್ದು, ಇದೀಗ ಗಮನ ಸೆಳೆದಿದೆ.
ಅಂದಹಾಗೆ ಇಂಥದ್ದೊಂದು ಹೋಲಿಕೆಯ ಮಾತನ್ನಾಡಲು ಕಾರಣ ಕೋವಿಡ್-19 ಪಾಸಿಟಿವ್ ಪ್ರಕರಣ. ಮುಂಬೈನಲ್ಲಿ ಹೆಚ್ಚುತ್ತಿರುವ ಕರೊನಾ ಕೇಸ್ಗಳ ಹಿನ್ನೆಲೆಯಲ್ಲಿ ಈ ಮಾತು ಕೇಳಬಂದಿದೆ. ಮುಂಬೈನಲ್ಲಿ ಇಂಥದ್ದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಬೇರಾರೂ ಅಲ್ಲ, ಇಲ್ಲಿನ ಮೇಯರ್.
ಮುಂಬೈನಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಮೇಯರ್ ಕಿಶೋರಿ ಪೆಡ್ನೇಕರ್, ಕೊಳೆಗೇರಿ ನಿವಾಸಿಗಳು ಎತ್ತರದ ಕಟ್ಟಡಗಳಲ್ಲಿ ವಾಸಿಸುವವರಿಗಿಂತ ಹೆಚ್ಚಿನ ನಾಗರಿಕ ಪ್ರಜ್ಞೆ ಹೊಂದಿರುವುದನ್ನು ಸಾಬೀತು ಪಡಿಸಿದ್ದಾರೆ. ನಗರದಲ್ಲಿನ ಎತ್ತರದ ಕಟ್ಟಡಗಳ ನಿವಾಸಿಗಳು ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸಿದ್ದರೆ ಮುಂಬೈನಲ್ಲಿ ಸೋಂಕಿನ ಪ್ರಕರಣಗಳು ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗುತ್ತಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಎತ್ತರದ ಕಟ್ಟಡಗಳಲ್ಲಿ, ವಿವಿಧ ವಸತಿ ಪ್ರದೇಶಗಳಲ್ಲಿ ವಾಸಿಸುವವರು ಹೆಚ್ಚು ವಿದ್ಯಾವಂತರು ಹಾಗೂ ಕೊಳೆಗೇರಿಗಳಲ್ಲಿ ವಾಸಿಸುವವರು ಕಡಿಮೆ ವಿದ್ಯಾವಂತರು ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ ಕೋವಿಡ್ ವಿಷಯದಲ್ಲಿ ಕೊಳೆಗೇರಿಗಳಲ್ಲಿ ವಾಸಿಸುವವರೇ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದ್ದಾರೆ. ವಿವಿಧ ವಸತಿ ಸಂಘಗಳಿಗೆ ನಿಯಮಗಳನ್ನು ಅನುಸರಿಸುವಂತೆ ನಾನು ವಿನಂತಿಸಿಕೊಳ್ಳಬಹುದು ಅಷ್ಟೇ ಎಂದು ಅವರು ಹೇಳಿದ್ದಾರೆ.
ಮುಂಬೈನಲ್ಲಿ ಕಳೆದ ಎರಡು ತಿಂಗಳಲ್ಲಿ ಕಂಡು ಬಂದಿರುವ ಹೊಸ ಕೋವಿಡ್-19 ಪ್ರಕರಣಗಳಲ್ಲಿ ಶೇ. 95 ಎತ್ತರದ ಕಟ್ಟಡಗಳಲ್ಲಿರುವ ಜನಸಮುದಾಯದಿಂದ ವರದಿಯಾಗಿದೆ ಎಂದು ಬಿಎಂಸಿ ಆಯುಕ್ತರು ಹೇಳಿದ್ದಾರೆ. ವಿದ್ಯಾವಂತರು ಕೂಡ ಪರಿಸ್ಥಿತಿಯನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮುಂಬೈನ ಮುನ್ಸಿಪಲ್ ಕಮಿಷನರ್ ಹೇಳಿದ್ದಾರೆ ಎಂಬುದಾಗಿ ಮೇಯರ್ ತಿಳಿಸಿದರು. (ಏಜೆನ್ಸೀಸ್)