

ಬೆಂಗಳೂರು: ಸಚಿವ ಸ್ಥಾನ ವಂಚಿತ ಪಕ್ಷದ ಮೂಲ ಶಾಸಕರ ಅಸಮಾಧಾನದ ಬೇಗೆ ಶೀಘ್ರವೇ ತಣಿಯುವ ಲಕ್ಷಣಗಳಿವೆ. ಸಂಪುಟ ‘ಸಮತೋಲನ’ ಕಾಪಾಡಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಜೆಟ್ ಅಧಿವೇಶನಕ್ಕೆ ಮುನ್ನವೇ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ. ಅಲ್ಲದೇ ಇದರಿಂದಾಗಿ ನೂತನ ಸಚಿವರಿಗೆ ಖಾತೆಗಳ ಹಂಚಿಕೆಯೂ ವಿಳಂಬವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪಕ್ಷದ ಮೂಲ ಶಾಸಕರನ್ನು ಸೇರಿಸಿಕೊಂಡು ಸಚಿವ ಸಂಪುಟದ ಖಾಲಿ ಆರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಿರಿ. ಇದರಿಂದ ಪಕ್ಷದ ಸಂಘಟನೆಗೆ ತಪು್ಪ ಸಂದೇಶ ರವಾನೆಯಾಗುವುದು ತಪ್ಪಲಿದ್ದು, ಮೂಲ ಶಾಸಕರು ನೋವು ನಿವಾರಣೆಯಾಗುತ್ತದೆ ಎಂದು ವರಿಷ್ಠರು ಸಲಹೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಸಂಪುಟ ಪುನಾರಚನೆ ಕುರಿತಂತೆ ನೀಡಿರುವ ಹೇಳಿಕೆಯಿಂದಾಗಿ ಬಿಜೆಪಿ ವಲಯದಲ್ಲಿ ವಿಸ್ತರಣೆಯ ಬಗ್ಗೆ ಚರ್ಚೆಯಾಗಿದೆ. ಆದರೆ ಮೂಲಗಳ ಪ್ರಕಾರ ಜುಲೈ ತನಕ ಮತ್ತೊಂದು ಸುತ್ತಿನ ವಿಸ್ತರಣೆ ಕಷ್ಟವೆಂದೇ ಹೇಳಲಾಗುತ್ತಿದೆ.
ವೃದ್ಧಿಸಿದ ವಿಶ್ವಾಸ: ಸಚಿವ ಸಂಪುಟಕ್ಕೆ 10 ಹೊಸ ಶಾಸಕರ ಸೇರ್ಪಡೆಯಿಂದಾಗಿ ವಲಸಿಗರಲ್ಲಿ ವಿಶ್ವಾಸ ವೃದ್ಧಿಸಿದ್ದು, ಬಾಕಿ ಸ್ಥಾನಗಳ ಭರ್ತಿಯಿಂದ ಯಾವುದೇ ಸಮಸ್ಯೆಯಾಗದು. ಅಷ್ಟಕ್ಕೂ ಉಳಿದ ವಲಸಿಗರಲ್ಲಿ ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಮೇಲ್ಮನೆ ಸದಸ್ಯರಾಗುವ ತನಕ ಮಂತ್ರಿಯಾಗುವುದಕ್ಕೆ ಅವಕಾಶವಿಲ್ಲ. ಆರ್ಆರ್ ನಗರದ ಮುನಿರತ್ನ ಹಾಗೂ ಮಸ್ಕಿಯ ಪ್ರತಾಪಗೌಡ ಪಾಟೀಲ್ರ ಕ್ಷೇತ್ರಕ್ಕೆ ಇನ್ನೂ ಚುನಾವಣೆ ನಡೆದಿಲ್ಲ. ಜೂನ್ನಲ್ಲಿ ಮೇಲ್ಮನೆ ಕೆಲವು ಸದಸ್ಯ ಸ್ಥಾನಗಳು ತೆರವಾಗಲಿವೆ. ಅಲ್ಲಿಯವರೆಗೆ ಸಚಿವ ಸಂಪುಟದ ಆರು ಸ್ಥಾನಗಳನ್ನು ಖಾಲಿಯಿಟ್ಟುಕೊಳ್ಳುವುದು, ಮೂಲ ಶಾಸಕರ ಅಸಮಾಧಾನ ಮತ್ತೂ ಹೆಚ್ಚಿಸುವುದು ಸಾಧುವಲ್ಲ ಎನ್ನುವುದು ವರಿಷ್ಠರ ಯೋಚನೆಯಾಗಿದೆ. ಪಕ್ಷ ಅಧಿಕಾರಕ್ಕೆ ಬರಲು ಕಾರಣದವರಿಗೆ ಮಂತ್ರಿ ಮಾಡುವುದಕ್ಕೆ ಅಭ್ಯಂತರವಿಲ್ಲ. ಅದೇ ಕಾಲಕ್ಕೆ ಪಕ್ಷದ ಸಂಘಟನೆಗೆ ದುಡಿದವರು, ಹಿರಿಯರಿಗೂ ಮನ್ನಣೆ ನೀಡಬೇಕು ಎಂಬ ಅಸಮಾಧಾನಿತರ ವಾದವು ವರಿಷ್ಠರ ಗಮನಸೆಳೆದಿದೆ ಎಂದು ಮೂಲಗಳು ಹೇಳಿವೆ.
ಬಿಎಸ್ವೈ ಆತಂಕ ನಿವಾರಣೆ: ಸಂಪುಟಕ್ಕೆ ಸೇರಿಸಿಕೊಳ್ಳಬೇಕಾದ ಪಕ್ಷ ಮೂಲದ ಆರು ಶಾಸಕರ ಪಟ್ಟಿ ಸಿದ್ಧವಾಗಿಟ್ಟುಕೊಂಡಿರಿ, ಕರೆದಾಗ ಚರ್ಚೆಗೆ ಬನ್ನಿ. ಉಳಿದ ವಲಸಿಗರಿಗೂ ಕೊಟ್ಟ ಮಾತು ಉಳಿಸಿಕೊಳ್ಳುವ ಬಗ್ಗೆ ಆತಂಕ ಬೇಡವೆಂದು ಬಿಎಸ್ವೈಗೆ ಹೈಕಮಾಂಡ್ ಅಭಯ ನೀಡಿದೆ. ಜೂನ್ ಇಲ್ಲವೆ ಜುಲೈಯೊಳಗೆ ಸಚಿವ ಸಂಪುಟ ಪುನಾರಚನೆ ಪರಿಹಾರ ಸೂತ್ರವನ್ನು ವರಿಷ್ಠರು ರೂಪಿಸಿದ್ದು, ಇದೇ ಸಂದರ್ಭದಲ್ಲಿ ಕೆಲವರನ್ನು ಕೈಬಿಟ್ಟು ಉಳಿದ ವಲಸಿಗರಿಗೆ ಅವಕಾಶ ನೀಡುವ ಚಿಂತನೆ ದೆಹಲಿ ನಾಯಕರು ನಡೆಸಿದ್ದಾರೆ. ಸಚಿವ ಸಂಪುಟ ಒಂದು ತಂಡವಾಗಿ ಕೆಲಸ ಮಾಡಬೇಕು ಎನ್ನುವ ಬಿಎಸ್ವೈ ಇಚ್ಛೆಗೆ ಅನುಗುಣವಾಗಿ ಎಲ್ಲ ಸಚಿವರ ಮೌಲ್ಯಮಾಪನವನ್ನು ವರಿಷ್ಠರು ಅಪೇಕ್ಷಿಸಿದ್ದು, ಇದೇ ವರದಿ ಆಧರಿಸಿ ಸಚಿವ ಸಂಪುಟ ಪುನಾರಚನೆ ಕಾಲಕ್ಕೆ ಯಾರನ್ನು ಬಿಡಬೇಕು, ಮತ್ತೆ ಯಾರನ್ನು ಮುಂದುವರಿಸಬೇಕು ಎಂದು ನಿರ್ಧರಿಸಲಿದ್ದಾರೆ.
ನಾನು ಈಗ ಸ್ವತಂತ್ರ. ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ನನ್ನ ಬೆಂಬಲ ನೀಡಿದ್ದೇನೆ. ಸರ್ಕಾರ ರಚನೆ ಸಂದರ್ಭ ಬೆಂಬಲ ನೀಡುವಂತೆ ಅವರು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕೊಟ್ಟ ಭರವಸೆಯನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದಾರೆ. | ಎನ್.ಮಹೇಶ್ ಉಚ್ಚಾಟಿತ ಬಿಎಸ್ಪಿ ಶಾಸಕ ಮತ್ತೊಮ್ಮೆ ಅಧಿಕಾರ ನೀಡಿ ಎಂದು ಕುಮಾರಸ್ವಾಮಿ ಕೇಳಬಹುದು. ಆದರೆ, ಜನ ಕೊಡಬೇಕಲ್ಲ? ನಮ್ಮ ಪಕ್ಷ ಬಿಟ್ಟು ಹೋಗಿ ಮಂತ್ರಿಯಾದವರು ನಮ್ಮ ಫ್ರೆಂಡ್ಸ್ ಅಲ್ಲ. ಫ್ರೆಂಡ್ಸ್ ಆಗಿದ್ದರೆ ಪಕ್ಷಾನೇ ಬಿಡುತ್ತಿರಲಿಲ್ಲ. ಅವರ ನಿಜಬಣ್ಣ ಬಯಲಾಗಿದೆ. ಅವರು ಚುನಾವಣೆಯಲ್ಲಿ ಗೆದ್ದು ಸಚಿವರಾಗಿರಬಹುದು. ಆದರೆ ಅವರೆಲ್ಲ ಈಗಲೂ ಪಕ್ಷಾಂತರಿಗಳು. | ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ