ಬೆಂಗಳೂರು: ರಂಜಾನ್ ಹಬ್ಬವನ್ನು ಮೇ 3ರ ಬದಲಾಗಿ ಮೇ 2ಕ್ಕೆ ನಡೆಸಲು ಉದ್ದೇಶಿಸಿರುವುದರಿಂದ ಸಾರ್ವತ್ರಿಕ ರಜೆಯನ್ನು ಅಂದೇ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಮೇ 3ಕ್ಕೆ ರಂಜಾನ್ ನಿಗದಿಯಾಗಿತ್ತು. ಆದರೆ ಚಂದ್ರ ದರ್ಶನ ಸಮಿತಿ 2ರಂದೇ ಆಚರಣೆಗೆ ನಿರ್ಧರಿಸಿರುವುದರಿಂದ ರಜೆ ಬದಲಾವಣೆ ಮಾಡಲಾಗಿದೆ. ರಂಜಾನ್ ದಿನ ಬದಲಾಗಿರುವುದರಿಂದ ಸರ್ಕಾರಿ ನೌಕರರಿಗೆ 3 ದಿನ ಸತತ ರಜೆ ಸಿಗಲಿದೆ. ಮೇ 1 ಭಾನುವಾರ ಕಾರ್ವಿುಕರ ದಿನ, 2 ರಂಜಾನ್, 3ರಂದು ಬಸವ ಜಯಂತಿ ರಜೆ ಇದೆ. ಸರ್ಕಾರ ರಂಜಾನ್ ಹಬ್ಬಕ್ಕೆ ಮೇ 3ರ ಬದಲು ಮೇ 2ಕ್ಕೆ ರಜೆ ನೀಡಿ ಆದೇಶ ಹೊರಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಸಾಮಾನ್ಯವಾಗಿ ಚಂದ್ರ ದರ್ಶನ ಸಮಿತಿ ಸಭೆ ನಡೆಸಿದ ಬಳಿಕವಷ್ಟೇ ರಂಜಾನ್ ಯಾವಾಗ ಎಂಬುದು ಅಂತಿಮವಾಗುತ್ತದೆ. ರಂಜಾನ್ ಉಪವಾಸ 29 ದಿನ ಮುಗಿದ ನಂತರವಷ್ಟೇ ಸಮಿತಿ ಸಭೆ ನಡೆಯುತ್ತದೆ. ಅದರ ಪ್ರಕಾರ ಮೇ 1 ರಂದು ಸಂಜೆ ಸಭೆ ಇದೆ ಎಂದು ಮೂಲಗಳು ಹೇಳಿವೆ. ಸರ್ಕಾರದ ಆದೇಶದಲ್ಲಿ ಮೂನ್ ಕಮಿಟಿ ಹೇಳಿರುವುದರಿಂದ ಎಂಬ ಅಂಶ ಸೇರಿರುವುದು ಮುಸ್ಲಿಮರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಸಮಿತಿಯ ಸಭೆಯೇ ಆಗದೇ ಹೇಗೆ ಆದೇಶದಲ್ಲಿ ಈ ರೀತಿ ಸೇರಿದೆ ಎಂಬ ಪ್ರಶ್ನೆ ಉದ್ಬವವಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೂಲಗಳ ಪ್ರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆದು ಆದೇಶ ಹೊರಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇಂದು ಚಂದ್ರದರ್ಶನವಾದರೆ ನಾಳೆ ಹಬ್ಬ ಎರಡು ವರ್ಷ ಬಳಿಕ ಸಂಭ್ರಮ
ಉಳ್ಳಾಲ(ಮಂಗಳೂರು): ರಂಜಾನ್ ಕೊನೆಯಲ್ಲಿ ಕಾಡಿದ್ದ ಕರೊನಾ ನಾಲ್ಕನೇ ಅಲೆಯ ಗುಮ್ಮ ದೂರವಾಗಿದೆ. ಇದರಿಂದ ಆತಂಕವಿಲ್ಲದೆ ರಂಜಾನ್ ಆಚರಣೆಗೆ ಮುಸ್ಲಿಮರು ಸಜ್ಜಾಗಿದ್ದು, ಕ್ಷಣಗಣನೆ ಆರಂಭಗೊಂಡಿದೆ. ಭಾನುವಾರ ಚಂದ್ರ ದರ್ಶನವಾದರೆ ರಂಜಾನ್ 29 ದಿನಕ್ಕೆ ಸೀಮಿತಗೊಂಡು, ಸೋಮವಾರ ಹಬ್ಬ (ಈದುಲ್ ಫಿತ್ರ್) ಆಚರಿಸಲಾಗುತ್ತದೆ. ಭಾನುವಾರ ಚಂದ್ರ ದರ್ಶನವಾಗದಿದ್ದರೆ, ರಂಜಾನ್ 30 ದಿನ ಪೂರ್ಣಗೊಂಡು ಮಂಗಳವಾರ ಆಚರಣೆ ನಡೆಯಲಿದೆ.
ಕಳೆದೆರಡು ವರ್ಷಗಳಲ್ಲಿ ಕರೊನಾ ಜಗತ್ತನ್ನೇ ತಲ್ಲಣಗೊಳಿಸಿತ್ತು. ಹಿಂದಿನ ವರ್ಷ ರಂಜಾನ್ಗೆ ಎರಡು ತಿಂಗಳಿರುವಾಗ ವಕ್ಕರಿಸಿದ ಕರೊನಾ, ಪೂರ್ತಿ ತಿಂಗಳು ಲಾಕ್ಡೌನ್ ಕಾಡಿದ್ದರಿಂದ ಮಸೀದಿಗಳು ಬಂದ್ ಆಗಿ, ಜನರು ಮನೆಯನ್ನೇ ಆರಾಧನಾ ಕೇಂದ್ರವನ್ನಾಗಿಸಿದರು. ಹೊಸ ವಸ್ತ್ರ ಖರೀದಿ, ಹಬ್ಬದ ಸಡಗರ ಇರಲಿಲ್ಲ. ಈ ಬಾರಿ ಈದುಲ್ ಫಿತ್ರ್ ಆಚರಣೆಗೆ ಹೊಸ ಬಟ್ಟೆ ಸಹಿತ ಇತರ ವಸ್ತುಗಳ ಖರೀದಿಯಲ್ಲಿ ಹಿಂದೆಂದಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ಮಹಿಳೆಯರು, ಮಕ್ಕಳ ಉತ್ಸಾಹ ಮೇರೆ ಮೀರಿದ್ದು, ವ್ಯಾಪಾರಸ್ಥರೂ ಖುಷಿಯಾಗಿದ್ದಾರೆ.
https://www.vijayavani.net/kangana-said-when-you-deny-hindi-as-the-national-language-you-are-denying-the-constitution/
https://www.vijayavani.net/three-accused-arrested-in-relation-to-murder-case/