

| ಹರೀಶ್ ಬೇಲೂರು ಬೆಂಗಳೂರು
ಹೊಗೆ ಮುಕ್ತ ದೇಶ ಕಟ್ಟುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಗ್ರಾಹಕರಿಗೆ ಮತ್ತೆ ಎಲ್ಪಿಜಿ ಸಬ್ಸಿಡಿ ಹಣ ದೊರೆಯಲಿದೆ. ಯೋಜನೆಯಡಿ ಸಬ್ಸಿಡಿ ಹಣ ನೀಡುವುದಾಗಿ ಕೇಂದ್ರ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದ 31.45 ಲಕ್ಷ ಫಲಾನಭವಿಗಳಿಗೆ ಇದರ ಲಾಭವಾಗಲಿದೆ.
ಪ್ರಸ್ತುತ ರಾಜ್ಯದಲ್ಲಿ 14.2 ಕೆಜಿ ಮರುಪೂರಣ ಸಿಲಿಂಡರ್ಗೆ 1,002 ರೂ.ಇದೆ. ತಿಂಗಳಿನ ಕೊನೆಯ ದಿನದಲ್ಲಿ ಕೇಂದ್ರ ಸಬ್ಸಿಡಿ ಹಣವನ್ನು ಲೆಕ್ಕಹಾಕಿ ಗ್ಯಾಸ್ ಏಜೆನ್ಸಿಗಳಿಗೆ ಬಿಲ್ ಕಳುಹಿಸಲಿದೆ. ನಂತರ ಗ್ರಾಹಕರ ಖಾತೆಗೆ 200 ರೂ. ಜಮೆಯಾಗಲಿದೆ. 2-3 ವರ್ಷ ಹಿಂದೆ ಯೋಜನೆಯಡಿ ನೀಡುತ್ತಿದ್ದ ಗ್ಯಾಸ್ ಸಬ್ಸಿಡಿ ಹಣವನ್ನು ಏಕಾಏಕಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಸಬ್ಸಿಡಿ ಹಣ ಸಿಗುವುದರಿಂದ ಅಗತ್ಯ ವಸ್ತುಗಳ ಬೆಲೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ತುಸು ನೆಮ್ಮದಿ ಸಿಕ್ಕಿದಂತಾಗಿದೆ.
ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾಪೋರೇಷನ್ ಲಿ. (ಐಒಸಿಎಲ್) 62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾಪೋರೇಷನ್ ಲಿ.(ಎಚ್ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾಫೋರೇಷನ್ ಲಿ.( ಬಿಪಿಸಿಎಲ್) 35.59 ಲಕ್ಷ ಸೇರಿ ಒಟ್ಟು 1.46,07900 ಗ್ರಾಹಕರು ಎಲ್ಪಿಜಿ ಸಂಪರ್ಕ ಹೊಂದಿದ್ದಾರೆ. ಉಜ್ವಲಾ ಯೋಜನೆಯಡಿ ಐಒಸಿಎಲ್ನ 13,93,748, ಬಿಪಿಸಿಎಲ್ನ 7,40,897, ಹಾಗೂ ಎಚ್ಪಿಸಿಎಲ್ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ.
ಸಮಸ್ಯೆ ಮರುಕಳಿಸಬಾರದು: ಗ್ಯಾಸ್ ಏಜೆನ್ಸಿ ಮತ್ತು ಬ್ಯಾಂಕ್ ಅಧಿಕಾರಿಗಳ ಎಟ್ಟುವಟ್ಟಿನಿಂದಾಗಿ ಹಿಂದೆ ಎಲ್ಪಿಜಿ ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಖಾತೆಗೆ ಜಮೆ ಆಗದಿರುವ ಬಗ್ಗೆ ಸಾಕಷ್ಟು ದೂರುಗಳು ದಾಖಲಾಗಿತ್ತು. ಯೋಜನೆಯಡಿ ಲಕ್ಷಾಂತರ ಗ್ರಾಹಕರು ಇದ್ದರೂ ಸಬ್ಸಿಡಿ ಹಣ ಕೆಲ ಗ್ರಾಹಕರಿಗೆ ಮಾತ್ರ ಸಿಗುತ್ತಿತ್ತು. ಈ ಬಗ್ಗೆ ಗ್ರಾಹಕರು ಏಜೆನ್ಸಿಯವರನ್ನು ವಿಚಾರಿಸಿದರೆ ಬ್ಯಾಂಕ್ನತ್ತ ಬೊಟ್ಟು ಮಾಡುತ್ತಿದ್ದರು. ಬ್ಯಾಂಕ್ನಲ್ಲಿ ವಿಚಾರಿಸಿದರೆ ಗ್ಯಾಸ್ ಎಜೆನ್ಸಿಗಳ ಕಡೆ ಬೊಟ್ಟ ಮಾಡುತ್ತಿದ್ದರು. ಈ ಮಧ್ಯೆದಲ್ಲಿ ಸಬ್ಸಿಡಿ ಹಣ ಸಿಗದೆ ಗ್ರಾಹಕರು ಪರದಾಡುವಂತಾಗಿತ್ತು. ಈಗ ಅಂಥ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ.
ಗ್ಯಾಸ್ ಸಮರ್ಪಕ ಖಾತೆ ಕೊಡಿ: ಗ್ಯಾಸ್ ಸಂಪರ್ಕ ಹೊಂದಿರುವ ಫಲಾನುಭವಿಯ ಹೆಸರಿನ ಬ್ಯಾಂಕ್ ಖಾತೆ ನೀಡತಕ್ಕದು. ಆಧಾರ್ ಸಂಖ್ಯೆ ಸರಿಯಾಗಿ ಮತ್ತು ಬೇರೆ ಬ್ಯಾಂಕ್ ಖಾತೆ ವಿವರ ನೀಡುವ ವೇಳೆ ಐಎಫ್ಎಸ್ಸಿ ಕೋಡ್ ಕಡ್ಡಾಯವಾಗಿ ನೀಡಬೇಕು. ಈ ಎಲ್ಲ ಮಾಹಿತಿ ಸರಿ ಇದ್ದರೆ ಗ್ರಾಹಕ ಖಾತೆಗೆ ಸಬ್ಸಿಡಿ ಹಣ ಬರುತ್ತದೆ. ಎರಡು ಸಂಪರ್ಕ ಹೊಂದಿರುವವರು ಸಬ್ಸಿಡಿಗೆ ಜಂಟಿ ಖಾತೆ ನೀಡಬಾರದು. ಕೆಲ ಫಲಾನುಭವಿಗಳು ಇದುವರೆಗೆ ಬ್ಯಾಂಕ್ ವಿವರ ಕೊಟ್ಟಿಲ್ಲ. ಅಂಥವರು
ಗ್ಯಾಸ್ ಸಬ್ಸಿಡಿ ಹಣ ಪಡೆಯಬೇಕೆಂದರೆ ಸಮರ್ಪಕವಾಗಿ ಬ್ಯಾಂಕ್ ಖಾತೆ ಸೇರಿ ಇನ್ನಿತರ ಮಾಹಿತಿಗಳನ್ನು ಗ್ಯಾಸ್ ಏಜೆನ್ಸಿಯವರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಬೇರೆ ಖಾತೆಗಳನ್ನು ನೀಡಬಾರದು. ಗ್ರಾಹಕರು ತಮ್ಮ ಒಮ್ಮೆ ನೀಡಿರುವ ಖಾತೆ ಮತ್ತು ಆಧಾರ್ಕಾರ್ಡ್ ವಿಲೀನ ಸೇರಿ ಇನ್ನಿತರ ಬಗ್ಗೆ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳುವುದು ಒಳಿತು.