ಯೋಗಿ vs ಪ್ರಿಯಾಂಕಾ? ಮತಸಮರಕ್ಕೆ ಕಲಿಗಳು ಸಜ್ಜು | ರಾಜ್ಯದಲ್ಲಿ ಪಕ್ಷಗಳಿಂದ ವೇದಿಕೆ ಸಿದ್ಧ

Yogi and Priyanka
Published on

ಶ್ರೀಕಾಂತ್ ಶೇಷಾದ್ರಿ

ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣೆ ಬಳಿಕ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಮುಂಬರುವ ಕರ್ನಾಟಕದ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸೇನಾನಿಗಳನ್ನು ಕರ್ನಾಟಕಕ್ಕೆ ನುಗ್ಗಿಸಲು ವೇದಿಕೆ ಸಜ್ಜುಗೊಳಿಸುತ್ತಿವೆ. ಮೊದಲ ಚರಣದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಮುಖಾ ಮುಖಿಗೆ ಅಖಾಡ ಸದ್ದಿಲ್ಲದೆ ಸಿದ್ಧವಾಗುತ್ತಿದೆ.

ಈ ವರ್ಷದ ಆರಂಭದಲ್ಲಿ (ಮಾರ್ಚ್) ಯೋಗಿ ಆದಿತ್ಯ ನಾಥ ಹಾಗೂ ಪ್ರಿಯಾಂಕಾ ಗಾಂಧಿ ನಡುವಿನ ಸಮರಕ್ಕೆ ಉತ್ತರಪ್ರದೇಶ ಸಾಕ್ಷಿಯಾಗಿತ್ತು. ಇದೀಗ ಇವರಿಬ್ಬರ ನಡುವೆ ಮತ್ತೊಂದು ಸುತ್ತಿನ ಹಣಾಹಣಿಯನ್ನು ರಾಜ್ಯದ ಜನ ಸಾಕ್ಷೀಕರಿಸುವ ಸಾಧ್ಯತೆ ದಟ್ಟವಾಗಿದೆ.

ಉತ್ತರಪ್ರದೇಶದಲ್ಲಿ 4-5 ವರ್ಷಗಳ ಕಾಲ ನಿರಂತರ ಜಟಾಪಟಿ ನಡೆಸಿ ಒಬ್ಬರನ್ನೊಬ್ಬರು ಮಾತಿನಲ್ಲಿ ತಿವಿದುಕೊಂಡಿದ್ದ ಯೋಗಿ ಹಾಗೂ ಪ್ರಿಯಾಂಕಾ ಜನವರಿಯಲ್ಲಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಜ.12ಕ್ಕೆ ಆದಿತ್ಯನಾಥ ಉಡುಪಿ ಮೂಲಕ ರಾಜ್ಯ ಪ್ರವಾಸಕ್ಕೆ ಚಾಲನೆ ಕೊಡುತ್ತಿದ್ದಾರೆ. ಪ್ರಿಯಾಂಕಾ ಕಾರ್ಯಕ್ರಮ ಇನ್ನೂ ಅಂತಿಮಗೊಂಡಿಲ್ಲ. ಅವರನ್ನು ಜ.8ರಂದು ಚಿತ್ರದುರ್ಗಕ್ಕೆ ಕರೆಸಲೇಬೇಕೆಂದು ಕಾಂಗ್ರೆಸ್ ರಾಜ್ಯ ನಾಯಕರು ಹಠಕ್ಕೆ ಬಿದ್ದಿದ್ದಾರೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಯೋಗಿ ವಿಜಯಿಯಾಗಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರೆ, ನಾಲ್ಕು ವರ್ಷ ಕಾಲ ಆ ರಾಜ್ಯದ ತುಂಬ ಸುತ್ತಿ, ಬಸವಳಿದಿದ್ದ ಪ್ರಿಯಾಂಕ ಗಾಂಧಿ ‘ಮೈ ಲಡ್ಕೀ ಹೂ, ಲಡ್ ಸಕ್ತಿಹೂ’ ಎಂದು ಅಬ್ಬರಿಸಿ ಕೊನೆಗೆ ಕೇವಲ ಎರಡು ಸ್ಥಾನಕ್ಕೆ ಸೀಮಿತಗೊಂಡು ಶರಣಾಗಿ ರಾಜ್ಯದಿಂದ ಹೊರಬಂದಿದ್ದರು.

ಕರ್ನಾಟಕದ ವಿಚಾರಕ್ಕೆ ಬರುವುದಾದರೆ ಯೋಗಿ ಆದಿತ್ಯನಾಥ ಅವರನ್ನು ಎರಡು ಆಯಾಮದಲ್ಲಿ ಚುನಾವಣೆಗೆ ಬಳಸಿಕೊಳ್ಳಲು ರಾಜ್ಯ ಬಿಜೆಪಿ ಬಯಸಿದೆ. ಹಾರ್ಡ್​ಕೋರ್ ಹಿಂದುತ್ವ ನಡವಳಿಕೆಯ ಅವರನ್ನು ಅದೇ ಧಾಟಿಯ ವಾತಾವರಣ ಇರುವ ಪ್ರದೇಶದಲ್ಲಿ ಪ್ರಚಾರದಲ್ಲಿ ಬಳಸುವುದು ಹಾಗೂ ನಾಥ ಪಂಥದ ಪ್ರತಿಪಾದಕರಾಗಿರುವ ಕಾರಣ ಒಕ್ಕಲಿಗರ ಪ್ರಾಬಲ್ಯ ಇರುವ ಪ್ರದೇಶದಲ್ಲಿ ಅವರನ್ನು ಹೆಚ್ಚೆಚ್ಚು ಬಳಸಿಕೊಳ್ಳಲು ಪಕ್ಷ ಹಲವು ಸುತ್ತಿನಲ್ಲಿ ಚರ್ಚೆ ನಡೆಸಿದೆ. ಪ್ರಮುಖವಾಗಿ ಕರಾವಳಿ, ಮಲೆನಾಡು, ಹಳೇ ಮೈಸೂರು ಭಾಗಕ್ಕೆ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ದೊಡ್ಡ ರ್ಯಾಲಿಗಳು, ಸಮಾಜದ ಪ್ರಮುಖರೊಂದಿಗೆ ಸಭೆಗಳು ನಡೆಯುವುದಿದೆ. ಧಾರ್ವಿುಕ ಮುಖಂಡರ ಜತೆ ಸಮಾಲೋಚನೆಯೂ ಆಗಲಿದೆ.

ಇದೇ ವೇಳೆ ಹಿಮಾಚಲದಲ್ಲಿ ಪಕ್ಷದ ಪರ ಪ್ರಚಾರ ನಡೆಸಿದ್ದ ಪ್ರಿಯಾಂಕಾ ಗಾಂಧಿಯವರ ಯಶಸ್ಸಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಪ್ರಸ್ತುತ ಚರ್ಚೆಯಾಗುತ್ತಿದೆ. ಆ ರಾಜ್ಯದ ಗೆಲುವಿನ ಕ್ರೆಡಿಟ್​ಅನ್ನೂ ಪ್ರಿಯಾಂಕಾಗೆ ಅರ್ಪಿಸಲಾಗುತ್ತಿದೆ. ಹೀಗಾಗಿ ಹಿಮಾಚಲದ ಗೆಲುವನ್ನು ಕರ್ನಾಟಕಕ್ಕೆ ವಿಸ್ತರಿಸಬೇಕೆಂಬುದು ಕೈ ರಾಜ್ಯ ನಾಯಕರ ಆಶಯವಾಗಿದೆ.

ಭಾರತ್ ಜೋಡೋ ರ‍್ಯಾಲಿ ವೇಳೆ ಮಂಡ್ಯಕ್ಕೆ ಬರಬೇಕೆಂದು ಆಹ್ವಾನ ನೀಡಿದಾಗ ಮುಂದೆ ಬರುತ್ತೇನೆಂದು ಪ್ರಿಯಾಂಕಾ ವಾಗ್ದಾನ ನೀಡಿದ್ದರು. ಈ ವಾಗ್ದಾನವನ್ನೇ ಆಧಾರವಾಗಿಟ್ಟುಕೊಂಡು ಈಗ ಅವರನ್ನು ಕರೆಸುವ ಪ್ರಯತ್ನ ನಡೆದಿದೆ. ಚಿತ್ರದುರ್ಗದಲ್ಲಿ ನಡೆಯುವ ಎಸ್ಸಿ-ಎಸ್ಟಿ ಐಕ್ಯತಾ ಸಮಾವೇಶಕ್ಕೆ ಕರೆಸಿ, ಬಳಿಕ ಅವರನ್ನು ರಾಜ್ಯದಲ್ಲಿ ಹೆಚ್ಚೆಚ್ಚು ಪ್ರವಾಸ ದಲ್ಲಿ ತೊಡಗುವಂತೆ ಕೋರಿಕೆ ಮುಂದಿಡಲು ಕೆಪಿಸಿಸಿ ಪ್ರಮುಖರು ನಿರ್ಧರಿಸಿದ್ದಾರೆ.

ಸಾಮ್ಯತೆಗಳು

ಉತ್ತರಪ್ರದೇಶದಲ್ಲಿ ಒಂದು ಅವಧಿಗೆ ಸರ್ಕಾರ ನಡೆಸಿ ಆಡಳಿತವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಿ ಮತ್ತೆ ಜನಮನ ಗೆದ್ದ ಯೋಗಿ ಅನುಭವ ಆಸರೆಯಾಗಲಿದೆ. ಅಭಿವೃದ್ಧಿ, ಹಿಂದುತ್ವ, ನಿಷ್ಠುರ ಆಡಳಿತ ಸಮೀಕರಣದ ಮೂಲಕ ಉತ್ತರಪ್ರದೇಶ ಪ್ರಯೋಗ ಇಲ್ಲಿ ಖುದ್ದು ಪರಿಚಯಿಸಲಾಗುತ್ತದೆ. ಪ್ರಿಯಾಂಕಾ ವಿಚಾರಕ್ಕೆ ಬಂದರೆ ಹಿಮಾಚಲದಲ್ಲಿ ಅವರು ರಾಜ್ಯ ನಾಯಕತ್ವಕ್ಕೆ ಒತ್ತಾಸೆಯಾಗಿ ನಿಂತು ಒಗ್ಗಟ್ಟು ಬಿಂಬಿಸುತ್ತ ತೆರೆಮರೆಯಲ್ಲಿ ಪಕ್ಷಕ್ಕೆ ಗೆಲುವಿಗೆ ಬೇಕಾದ ತಂತ್ರ ರೂಪಿಸಿ ಸದ್ದಿಲ್ಲದೇ ಅನುಷ್ಠಾನಕ್ಕೆ ತಂದಿದ್ದರು. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಅಗತ್ಯವಾದ ಟಾನಿಕ್ ಇವರಿಬ್ಬರ ಬಳಿ ಇದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಯೋಗಿ ಬಂದರೆ ಲಾಭವೇನು?

  • ಬಿಜೆಪಿಯ ಹಿಂದುತ್ವ ಸಿದ್ಧಾಂತ ಪ್ರಖರತೆ ಪಡೆದು ಈವರೆಗಿನ ಅಸಮಾಧಾನ ತೊಡೆದುಹಾಕಲಿದೆ.
  • ಅವರ ಹರಿತ ಮಾತು, ನಿರರ್ಗಳ ವಾಗ್ಝರಿ ಮತಗಳ ಧ್ರುವೀಕರಣಕ್ಕೆ ಕಾರಣವಾಗಬಹುದು.
  • ಯುವಜನರ ಹೃನ್ಮನದಲ್ಲಿ ಯೋಗಿ ಹೆಸರು ತುಂಬಿದ್ದು, ಇದರ ಲಾಭ ಪಡೆಯುವ ಉದ್ದೇಶ.
  • ಒಕ್ಕಲಿಗ ಸಮುದಾಯದ ಮಿಡಿತವನ್ನು ತಿಳಿದ ವೈದ್ಯರ ರೂಪದಲ್ಲಿ ಚಿಕಿತ್ಸಕರಾಗಬಹುದು.

ಪ್ರಿಯಾಂಕಾ ಭೇಟಿ ಅನುಕೂಲ

  • ಹಿಮಾಚಲಪ್ರದೇಶದ ಗೆಲುವು ಪ್ರಿಯಾಂಕಾರಲ್ಲಿ ಒಂದಷ್ಟು ಹುಮ್ಮಸ್ಸು ತಂಬಿದ್ದು, ಅದರ ಲಾಭ ಪಡೆಯುವ ಹವಣಿಕೆ.
  • ಇಂದಿರಮ್ಮನ ಮೊಮ್ಮಗಳು ಎಂಬ ಟ್ರಂಪ್ ಕಾರ್ಡ್ ಒಳನಾಡಿನ ಪ್ರದೇಶದಲ್ಲಿ ಬಳಕೆ.
  • ಮೋದಿ, ಅಮಿತ್ ಷಾ ಅಬ್ಬರಕ್ಕೆ ಎದುರಾಗಿ ಒಂದು ರಾಷ್ಟ್ರೀಯ ನಾಯಕತ್ವದ ಫೇಸ್.
  • ಗಾಂಧಿ ಕುಟುಂಬ ಸಂಪೂರ್ಣವಾಗಿ ಕರ್ನಾಟಕದ ಚುನಾವಣೆಯಲ್ಲಿ ತೊಡಗಿಸಿಕೊಂಡಂತಾಗಲಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net