ಬಿಜೆಪಿ ಸ್ವಚ್ಛತಾ ಅಭಿಯಾನ: ಈಶ್ವರಪ್ಪ ರಾಜೀನಾಮೆ ಬಳಿಕ ಸಮಗ್ರ ಶುದ್ಧಿಗೆ ವರಿಷ್ಠರ ಚಿಂತನೆ..

Front
ರಾಜೀನಾಮೆ ನೀಡದಂತೆ ಕಣ್ಣೀರ್ಗರೆದ ಮಹಿಳಾ ಕಾರ್ಯಕರ್ತರನ್ನು ಸಮಾಧಾನಿಸಿದ ಈಶ್ವರಪ್ಪ
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಪರ್ಸೆಂಟೇಜ್ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ತಲೆದಂಡವಾದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲೀಗ ಸಮಗ್ರ ಸ್ವಚ್ಛತೆಯ ಚರ್ಚೆ ಶುರುವಾಗಿದೆ. ಪಕ್ಷ ಹಾಗೂ ಸಂಘದ ಕಡೆಯಿಂದ ವರಿಷ್ಠರಿಗೆ ತಲುಪಿರುವ ವರದಿಯಲ್ಲಿ ‘ಸ್ವಚ್ಛತಾ ಅಭಿಯಾನ’ದ ಮೂಲಕ ಪಕ್ಷಕ್ಕೆ ಹೊಸ ದಿಕ್ಸೂಚಿ ನೀಡುವ ಬಗ್ಗೆ ಶಿಫಾರಸು ಸಲ್ಲಿಕೆಯಾಗಿದ್ದು, ಪಕ್ಷ ಹಾಗೂ ಸರ್ಕಾರಕ್ಕೆ ಹೊಸ ದಿಕ್ಕನ್ನು ನೀಡಬೇಕಾದ ಅಗತ್ಯವನ್ನು ವಿಸõತವಾಗಿ ವಿವರಿಸಲಾಗಿದೆ. ವರದಿಯಲ್ಲಿನ ಅಂಶಗಳನ್ನು ಜಾರಿಗೆ ತರಲು ವರಿಷ್ಠರು ಗಂಭೀರವಾಗಿ ಚಿಂತನೆ ನಡೆಸಿದ್ದಾರೆಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರತಿ ನಿತ್ಯ ವರಿಷ್ಠರಿಗೆ ರಹಸ್ಯ ಮಾಹಿತಿ ರವಾನೆಯಾಗುತ್ತಿರುತ್ತದೆ. ಅಂತಹ ರಹಸ್ಯ ವರದಿಗಳಲ್ಲೇ ಇಂದಿನ ಬೆಳವಣಿಗೆಗಳನ್ನು ವಿವರಿಸಲಾಗಿದೆ. ರಾಜ್ಯ ವಿಧಾನಸಭೆಗೆ 12 ತಿಂಗಳಿನಲ್ಲಿ ಚುನಾವಣೆ ಎದುರಾಗುತ್ತಿದೆ. ಹಿಂದುತ್ವದ ಹೆಸರಿನಲ್ಲಿ ಕೆಲವೊಂದು ಘಟನೆಗಳು ಆರಂಭದಲ್ಲಿ ಪಕ್ಷದ ವರ್ಚಸ್ಸಿಗೆ ಪುಷ್ಟಿ ನೀಡಿದ್ದವು. ಇದು ಅತಿಯಾದಂತೆ ಹಿನ್ನಡೆಯೂ ಆಗಲಾರಂಭಿಸಿತ್ತು. ಇಂತಹ ಸಂದರ್ಭದಲ್ಲಿ ಪರ್ಸೆಂಟೇಜ್ ಆರೋಪ ಮೆತ್ತಿಕೊಂಡಿರುವುದು ವರಿಷ್ಠರಿಗೆ ತಲೆಬಿಸಿ ತಂದಿದೆ. ಉತ್ತರ ಭಾರತದಲ್ಲಿ ಗೆದ್ದಷ್ಟು ಸುಲಭವಾಗಿ ದಕ್ಷಿಣ ಭಾರತ ಕೈಗೆ ಸಿಗುವುದಿಲ್ಲ ಎಂಬುದು ಪದೇಪದೆ ಸಾಬೀತಾಗಿದೆ. ಆದ್ದರಿಂದ ಸಂಘದ ಸೂಚನೆಯಂತೆ ಎಚ್ಚರಿಕೆ ಹೆಜ್ಜೆಯನ್ನಿಡಲು ವರಿಷ್ಠರು ನಿರ್ಧರಿಸಿದ್ದಾರೆ. ಇಲ್ಲಿಂದ ಹೋಗಿರುವ ವರದಿಗಳನ್ನು ಗಂಭೀರವಾಗಿ ಪರಿಗಣಿಸಲು ಇದೇ ಕಾರಣವಾಗಿದೆ.

2 ದಿನದಲ್ಲಿ ಸಭೆ: ಯಾವುದೇ ರಾಜ್ಯದಲ್ಲಿ ಪಕ್ಷ ಹಾಗೂ ಸರ್ಕಾರದಲ್ಲಿ ಏನೇ ಬದಲಾವಣೆಗಳ ಬಗ್ಗೆ ತೀರ್ಮಾನ ತೆಗೆದು ಕೊಳ್ಳಬೇಕಾದರೆ ಪಕ್ಷ ಹಾಗೂ ಸಂಘದ ರಾಷ್ಟ್ರೀಯ ಮುಖಂಡರ ರಹಸ್ಯ ಸಭೆಯಲ್ಲಿ ನಿರ್ಧಾರವಾಗಬೇಕು. ಕರ್ನಾಟಕದ ವಿಚಾರದಲ್ಲಿ ಏ.16ಕ್ಕೆ ಮುನ್ನ ಸಭೆ ನಡೆಯಬೇಕಾಗಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಸಭೆ ಮೂರರಿಂದ ನಾಲ್ಕು ದಿನ ಮುಂದಕ್ಕೆ ಹೋಗಿದೆ ಎಂಬ ಸುದ್ದಿ ಇದೆ. ರಾಜ್ಯ ಕಾರ್ಯಕಾರಿಣಿಯ ನಂತರ ಈ ಸಭೆ ದೆಹಲಿಯಲ್ಲಿ ನಡೆಯಲಿದೆ.

ಇಂದು-ನಾಳೆ ಕಾರ್ಯಕಾರಿಣಿ: ಹೊಸಪೇಟೆಯಲ್ಲಿ ಏ.16 ಮತ್ತು 17 ರಂದು ನಡೆಯುವ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗವಹಿಸುತ್ತಿದ್ದಾರೆ. ಆ ಸಭೆಯಲ್ಲಿ ಯಾವುದೇ ನಿರ್ಧಾರ ಆಗುವುದಿಲ್ಲ. ಕೋರ್ ಕಮಿಟಿಯಲ್ಲಿ ಮಾತ್ರ ಈಶ್ವರಪ್ಪ ರಾಜೀನಾಮೆ ವಿಚಾರ ಚರ್ಚೆಯಾದರೂ ತೀರ್ವನವೇನೂ ಅಗುವುದಿಲ್ಲ. ನಡ್ಡಾ ದೆಹಲಿಗೆ ಹಿಂದಿರುಗಿದ ಮೇಲೆ ಅವರು ಮತ್ತು ಅಮಿತ್ ಷಾ ಸಂಘದ ಮುಖಂಡರ ಜತೆ ನಡೆಸುವ ಸಭೆಯಲ್ಲಿ ಮಹತ್ವದ ತೀರ್ವನವಾಗಲಿದೆ ಎಂದು ಪಕ್ಷದ ಉನ್ನತ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

ಮಾಹಿತಿ ಸಂಗ್ರಹ: ಗುತ್ತಿಗೆದಾರರ ಸಂಘ ಪದೇಪದೆ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಯಾವ ಯಾವ ಸಚಿವರು ಹಾಗೂ ಶಾಸಕರ ವಿರುದ್ಧ ಪರ್ಸೆಂಟೇಜ್ ಆರೋಪಗಳಿವೆ ಎಂಬ ಬಗ್ಗೆಯೂ ವರಿಷ್ಠರು ತಮ್ಮದೇ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದು, ಈ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಆಮ್ ಆದ್ಮಿಯ ಭಯ: ಪಂಜಾಬ್​ನಲ್ಲಿ ಸರ್ಕಾರ ರಚಿಸಿರುವ ಆಮ್ ಆದ್ಮಿ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡಿ ಮಾಡಬಹುದೆಂಬ ಭಯ ವರಿಷ್ಠರಿಗಿದೆ. ಆಮ್ ಆದ್ಮಿ ಬಹಳ ಅಗ್ರೆಸಿವ್ ಆಗಿ ಮುನ್ನಡೆದಿದೆ. ಆದರೆ ಪ್ರಮುಖವಾಗಿ ಆ ಪಕ್ಷ ಇರುವುದು ನಗರ ಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚಿನ ನೆಲೆ ಇರುವುದು ನಗರಗಳಲ್ಲಿಯೇ. ಇತ್ತೀಚಿನ ಬೆಳವಣಿಗೆಗಳು ನಗರ ಪ್ರದೇಶದ ಮತದಾರರಿಗೆ ಪಕ್ಷದ ಮೇಲೆ ಭ್ರಮನಿರಸನ ಮೂಡಿಸಿದರೆ ಆ ಮತಗಳು ಕಾಂಗ್ರೆಸ್ ಅಥವಾ ಜೆಡಿಎಸ್​ಗಿಂತ ಆಮ್ ಆದ್ಮಿ ಪಕ್ಷದ ಕಡೆ ಹೋಗಬಹುದೆಂಬ ಚರ್ಚೆ ಪಕ್ಷದಲ್ಲಿ ನಡೆದಿದೆ. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕಾದರೆ ಸಮಗ್ರ ಸ್ವಚ್ಛತೆಯೇ ದಾರಿ ಎಂಬ ಚಿಂತನೆಗೆ ಕಾರಣವಾಗಿದೆ.

ಪ್ರಕರಣದಿಂದ ಮುಕ್ತನಾಗಬೇಕೆಂದು ಹಾಗೂ ಪಕ್ಷದ ಯಾರಿಗೂ ಮುಜುಗರವಾಗಬಾರ ದೆಂದು ಸಿಎಂಗೆ ರಾಜೀನಾಮೆ ಸಲ್ಲಿಸಿದ್ದೇನೆ. ಹಾಗೆಯೇ ಪ್ರಕರಣದ ಸಮಗ್ರ ತನಿಖೆಗೂ ಮನವಿ ಮಾಡಿದ್ದೇನೆ. | ಕೆ.ಎಸ್.ಈಶ್ವರಪ್ಪ ಈಶ್ವರಪ್ಪ ಅವರ ರಾಜೀನಾಮೆ ಅಂಗೀಕರಿಸಿದ್ದೇನೆ. | ಬಸವರಾಜ ಬೊಮ್ಮಾಯಿ ಸಿಎಂ

ರಹಸ್ಯ ವರದಿಯಲ್ಲಿ ಏನಿದೆ?

  • ಪರ್ಸೆಂಟೇಜ್ ಚುನಾವಣೆಯ ಮುಖ್ಯ ವಿಷಯ
  • ಪ್ರಧಾನಿ ಮೋದಿ ಅವರ ಇಮೇಜ್​ಗೆ ಧಕ್ಕೆ ತರುತ್ತಿದೆ
  • ಈಶ್ವರಪ್ಪ ಪ್ರಕರಣವನ್ನು ಸ್ವಚ್ಛತೆಯ ಆರಂಭವೆಂದು ಭಾವಿಸಬೇಕು
  • ಇನ್ನಷ್ಟು ಸಚಿವರು ಹಾಗೂ ಶಾಸಕರ ಹೆಸರು ಹೊರಬರಬಹುದುಸರ್ಕಾರ ಹಾಗೂ ಪಕ್ಷದ ನೇತೃತ್ವ ವಹಿಸಿದವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ
  • ಸಮಗ್ರ ಬದಲಾವಣೆಯೊಂದಿಗೆ ಹೊಸ ಮುಖ ಬೇಕು

ಬದಲಾವಣೆ ಸಾಧ್ಯತೆಗಳು

  • ಪಕ್ಷದ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕ
  • ಗುಜರಾತ್ ಮಾದರಿಯಲ್ಲಿ ಸಂಪುಟ ಪುನಾರಚನೆ
  • ಸಂಪುಟಕ್ಕೆ ಕ್ಲೀನ್ ಇಮೇಜ್ ಇರುವ ಹೊಸ ಮುಖಗಳ ಆಯ್ಕೆ
  • ಪಕ್ಷಕ್ಕೂ ಕ್ರಿಯಾಶೀಲ ಪದಾಧಿಕಾರಿಗಳ ನೇಮಕ
  • ಬಾಯಿಗೆ ಬಂದಂತೆ ಮಾತನಾಡಲು ಕಡಿವಾಣ
  • ಯಾರದೋ ಬಾಲಂಗೋಚಿಗಳಂತಿರುವ ಪದಾಧಿಕಾರಿಗಳನ್ನು ಹೊರಹಾಕುವುದು

ಈಶ್ವರಪ್ಪ ರಾಜೀನಾಮೆ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ರಾತ್ರಿ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ‘ನಾನು ಯಾವ ತಪ್ಪನ್ನೂ ಮಾಡಿಲ್ಲ, ಸಣ್ಣ ತಪು್ಪ ಮಾಡಿದ್ದರೂ ನನ್ನ ಮನೆದೇವರಾದ ಚೌಡೇಶ್ವರಿ ನೋಡಿಕೊಳ್ಳುತ್ತಾಳೆ’ ಎಂದರು.

ಕೈಪಡೆ ಜಿಲ್ಲಾ ಹೋರಾಟ: ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಕೊಡಬೇಕೆಂದು ಒತ್ತಡ ಸೃಷ್ಟಿಸುವಲ್ಲಿ ಸಫಲವಾದ ಕಾಂಗ್ರೆಸ್ ಶನಿವಾರದಿಂದ ಜಿಲ್ಲಾ ಕೇಂದ್ರಗಳಲ್ಲಿ ಜನಜಾಗೃತಿ ಹೋರಾಟ ಹಮ್ಮಿಕೊಂಡಿದೆ.

ಬದಲಾವಣೆ ಏಕೆ?: ಪರ್ಸೆಂಟೇಜ್ ಆರೋಪ ಹಿನ್ನೆಲೆಯಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ನಿದರ್ಶನವಾಗಿ ಇಟ್ಟುಕೊಂಡು ಸಮಗ್ರ ಬದಲಾವಣೆ ಮಾಡುವುದು ಪಕ್ಷದ ಭವಿಷ್ಯ ದೃಷ್ಟಿಯಿಂದ ಒಳ್ಳೆಯದೆಂಬ ಅಭಿಪ್ರಾಯಕ್ಕೆ ವರಿಷ್ಠರು ಬಂದಿದ್ದಾರೆಂದು ಮೂಲಗಳು ಹೇಳಿವೆ. ಈಶ್ವರಪ್ಪ ರಾಜೀನಾಮೆಯೊಂದರಿಂದಲೇ ಪಕ್ಷ ಹಾಗೂ ಸರ್ಕಾರಕ್ಕೆ ಅಂಟಿರುವ 40 ಪರ್ಸೆಂಟೇಜ್ ಆರೋಪ ದೂರವಾಗುವುದಿಲ್ಲ. ಮತ್ತಷ್ಟು ಹೆಸರು ಹೊರ ಬಂದರೆ ಪಕ್ಷದ ಹೆಸರು ಇನ್ನಷ್ಟು ಹಾಳಾಗಿ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರುವುದರಿಂದ ಎಚ್ಚೆತ್ತುಕೊಳ್ಳಬೇಕಾಗಿದೆ.

ನಾಯಕರ ಪ್ರವಾಸ ಮುಂದಕ್ಕೆ: ರಾಜ್ಯ ಬಿಜೆಪಿ ಮುಖಂಡರು ರಾಜ್ಯದ ನಾಲ್ಕು ದಿಕ್ಕುಗಳಿಂದ ಪ್ರಾರಂಭಿಸಲು ಉದ್ದೇಶಿಸಿದ್ದ ಪ್ರವಾಸಕ್ಕೆ ಕೆ.ಎಸ್.ಈಶ್ವರಪ್ಪ ಪ್ರಕರಣ ಅಡ್ಡಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿ ಹಲವು ಮುಖಂಡರ ನೇತೃತ್ವದಲ್ಲಿ ಪ್ರವಾಸಕ್ಕೆ ಕಾರ್ಯಕ್ರಮ ರೂಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net