ಮುಕ್ತಾಯದ ಹಂತಕ್ಕೆ ‘ಘೋಸ್ಟ್’; ಆ ನಂತರ ‘ಘೋಸ್ಟ್ 2’

Ghost
Published on

ಬೆಂಗಳೂರು: ಆರ್ಜೆ ಶ್ರೀನಿ ನಿರ್ದೇಶನದಲ್ಲಿ ಶಿವರಾಜಕುಮಾರ್ ಅಭಿನಯಿಸುತ್ತಿರುವ ‘ಘೋಸ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ವಿಶೇಷವೆಂದರೆ, ಕಥೆ ಒಂದೇ ಚಿತ್ರಕ್ಕೆ ಮುಗಿಯುವುದಿಲ್ಲ. ಎರಡನೆಯ ಭಾಗದಲ್ಲೂ ಮುಂದುವರಿಯಲಿದೆ.

ಸೋಮವಾರ, ಕನಕಪುರ ರಸ್ತೆ ಬಳಿಯ ಒಂದು ರೆಸಾರ್ಟ್​ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಶಿವರಾಜಕುಮಾರ್, ಅನುಪಮ್ ಖೇರ್, ಮಲಯಾಳಂ ನಟ ಜಯರಾಮ್, ವಿಜಯಲಕ್ಷ್ಮೀ ಸಿಂಗ್ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

‘ಘೋಸ್ಟ್’ ಕುರಿತು ಮಾತನಾಡಿದ ಶ್ರೀನಿ, ‘ನಾನು ಪ್ರತಿ ಸಿನಿಮಾ ಮಾಡಿದಾಗಲೂ, ಯಾಕೆ ಬೇರೆಯವರನ್ನು ನಿರ್ದೇಶನ ಮಾಡುವುದಿಲ್ಲ ಎಂದು ಎಲ್ಲರೂ ಕೇಳುತ್ತಿದ್ದರು. ನಾನು ಸಿನಿಮಾ ಮಾಡಿದರೆ ಶಿವರಾಜ್ ಕುಮಾರ್ ಅಭಿನಯದಲ್ಲಿ ಮಾತ್ರ ಎಂದು ಎಲ್ಲರಿಗೂ ಹೇಳುತ್ತಿದ್ದೆ. ಅವರಿಗಾಗಿ ಒಂದು ಸ್ಕ್ರಿಪ್ಟ್​ ಮಾಡಿಕೊಂಡು ಅವರಿಗೆ ಹೇಳಿದೆ. ಅವರು ಕಥೆ ಕೇಳಿ ಬಹಳ ಇಷ್ಟರು. ಆಮೇಲೆ ನಾಲ್ಕೈದು ದಿನಗಳಲ್ಲಿ ಚಿತ್ರವೇ ಘೋಷಣೆಯಾಯ್ತು. ಈ ಸಿನಿಮಾ ಹೀಗೆಯೇ ಮೂಡಿಬರಬೇಕು ಎಂದು ಸಾಕಷ್ಟು ಹೋಮ್​ವರ್ಕ್ ಮಾಡಿಕೊಂಡು, ಚಿತ್ರೀಕರಣ ಶುರು ಮಾಡಿದೆವು. ಮೊದಲು ಇಷ್ಟು ದೊಡ್ಡ ಸಿನಿಮಾ ಆಗುತ್ತದೆ ಅಂತ ಅಂದುಕೊಂಡಿರಲಿಲ್ಲ. ಸಂದೇಶ್ ನಾಗರಾಜ್ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಾಗ ದೊಡ್ಡದಾಯ್ತು’ ಎನ್ನುತ್ತಾರೆ ಶ್ರೀನಿ.

‘ಘೋಸ್ಟ್’ ಎಂಬ ಹೆಸರು ಕೇಳುತ್ತಿದ್ದಂತೆ ಇದೊಂದು ಹಾರರ್ ಸಿನಿಮಾ ಎಂದನಿಸಬಹುದು. ಆದರೆ, ಇದು ಹಾರರ್ ಸಿನಿಮಾ ಅಲ್ಲ, ಆ್ಯಕ್ಷನ್ ಥ್ರಿಲ್ಲರ್ ಎನ್ನುತ್ತಾರೆ ಶ್ರೀನಿ. ‘ಇದೊಂದು ದರೋಡೆ ಹಿನ್ನೆಲೆಯ ಸಿನಿಮಾ. ಎರಡು ದಿನದಲ್ಲಿ ನಡೆಯುವ ಕಥೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರ ಪಾತ್ರಕ್ಕೆ ಮೂರು ಶೇಡ್​​ಗಳಿವೆ. ಬೇರೆಬೇರೆ ಗೆಟಪ್​ಗಳಿವೆ. ಈಗಾಗಲೇ ಶೇ.90ರಷ್ಟು ಶೂಟಿಂಗ್ ಮುಗಿದಿದೆ. 12 ದಿವಸ ಮಾತ್ರ ಶೂಟಿಂಗ್ ಪೆಂಡಿಂಗ್ ಇದೆ. ಏಪ್ರಿಲ್​ನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿ, ಆಗಸ್ಟ್ ಕೊನೆಯಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ’ ಎನ್ನುತ್ತಾರೆ.

ಚಿತ್ರದ ಕುರಿತು ಮಾತನಾಡುವ ಶಿವರಾಜಕುಮಾರ್, ‘ಶ್ರೀನಿ ಬಹಳ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಒಂದು ಪಾತ್ರ ಜಯರಾಂ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದನಿಸಿತು. ಅನುಪಮ್​ ಖೇರ್, ಜಯರಾಂ ಅವರಂತಹ ನಟರ ಜತೆಗೆ ನಟಿಸುತ್ತಿರುವುದು ನನ್ನ ಪುಣ್ಯ. ಚಿತ್ರ ಬಹಳ ಅದ್ಧೂರಿಯಾಗಿ ಮೂಡಿಬರುತ್ತಿದೆ. ಮಹೇಂದ್ರ ಸಿಂಹ ಅವರ ಛಾಯಾಗ್ರಹಣದಲ್ಲಿ ಪ್ರತಿ ದೃಶ್ಯ ಸಹ ಒಂದು ಪೇಂಟಿಂಗ್​ನಂತಿದೆ. ಚಿತ್ರದಲ್ಲೊಂದು ಒಳ್ಳೆಯ ವಿಷಯವನ್ನು ತೆಗೆದುಕೊಂಡಿದ್ದಾರೆ ಶ್ರೀನಿ. ನನ್ನ ಪಾತ್ರಕ್ಕೆ ಮೂರು ಶೇಡ್​ಗಳಿವೆ’ ಎನ್ನುತ್ತಾರೆ.

‘ಘೋಸ್ಟ್’ ಸಿನಿಮಾ ಇನ್ನಷ್ಟು ಮುಂದುವರಿಯಲಿದ್ದು, ಎರಡನೆಯ ಭಾಗವೂ ಬರುತ್ತದಂತೆ. ಮೊದಲು ಈ ಚಿತ್ರದ ಬಿಡುಗಡೆಯ ನಂತರ ಬೀರಬಲ್ 2 ಚಿತ್ರವನ್ನು ಕೈಗೆತ್ತಿಕೊಳ್ಳುತ್ತಾರಂತೆ ಶ್ರೀನಿ. ಆ ನಂತರ ಘೋಸ್ಟ್ 2 ಚಿತ್ರೀಕರಣ ಶುರುವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net