ಸೋದರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

Train
Published on

ಕಾನ್ಪುರ: 22 ವರ್ಷದ ಯುವಕನೋರ್ವ ಚಲಿಸುತ್ತಿದ್ದ ರೈಲಿನ ಎದುರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾನ್ಪುರದಲ್ಲಿ ನಡೆದಿದೆ.

ರಕ್ಷಾಬಂಧನದಂದು ತನ್ನ ಸೋದರಿಗೆ ಸೈಕಲ್​ನ್ನು ಉಡುಗೊರೆಯನ್ನಾಗಿ ಕೊಡಲು ಸಾಧ್ಯವಾಗಲಿಲ್ಲ ಎಂಬ ನೋವೇ ಆತನ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.  ಮೃತನ ಹೆಸರು ಪುಟ್ಟಿ ಲಾಲ್​. ಕಾನ್ಪುರದ ಖೊಂಡಾನ್ಪುರ್ವಾ ಗ್ರಾಮದವನು. ಶಿವರಾಜ್​ಪುರ ಏರಿಯಾದಲ್ಲಿರುವ ಬರಜ್​ಪುರ ರೈಲ್ವೆ ಸ್ಟೇಶನ್​ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ರಕ್ಷಾ ಬಂಧನಕ್ಕೆ ಸೈಕಲ್​ ಉಡುಗೊರೆ ಕೊಡುವುದಾಗಿ ಪುಟ್ಟಿ ಹೇಳಿದ್ದ. ಆದರೆ ಅಷ್ಟು ಹಣ ಅವನ ಬಳಿ ಇರಲಿಲ್ಲ. ಹಾಗಾಗಿ ಸೈಕಲ್​ ತರಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ತುಂಬ ನೊಂದುಕೊಂಡಿದ್ದ. ಬಹುಶ್ಯಃ ಅದೇ ಕಾರಣಕ್ಕೆ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪುಟ್ಟಿಯ ಹಿರಿಯ ಸಹೋದರ ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ:  ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಹುಬ್ಬಳ್ಳಿ: ಮದುವೆಮನೆಯಿಂದ ಆಸ್ಪತ್ರೆಗೆ ರೌಡಿಷೀಟರ್‌!

ಪುಟ್ಟಿಲಾಲ್​ ಮಂಗಳವಾರ ರಾತ್ರಿ ಊಟ ಮಾಡಿ ಮಲಗಲು ಹೋಗಿದ್ದ. ಆದರೆ ಬುಧವಾರ ಬೆಳಗ್ಗೆಯಿಂದ ಅವನು ಕಾಣೆಯಾಗಿದ್ದ. ಹಾಗಾಗಿ ಹುಡುಕಲು ಪ್ರಾರಂಭಿಸಿದ್ದೆವು. ಅಷ್ಟರಲ್ಲಿ ರೈಲ್ವೆ ನಿಲ್ದಾಣದಲ್ಲಿ ಶವವನ್ನು ನೋಡಿದ ಕೆಲವರು ಬಂದು ತಿಳಿಸಿದರು. ಹೋಗಿ ನೋಡಿದರೆ ಪುಟ್ಟಿಯದೇ ಆಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.

ಮೃತದೇಹವನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net