

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಲಾಕ್ಡೌನ್ 4.0 ಅವಧಿಯಲ್ಲಿ ಏನೆಲ್ಲ ಸಡಲಿಕೆಯಾಗಲಿದೆ, ಎಲ್ಲೆಲ್ಲಿ ಅದು ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂಬ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ, ಲಾಕ್ಡೌನ್ 4.0 ಅವಧಿಯಲ್ಲಿ ಸಾರ್ವಜನಿಕ ಸಾರಿಗೆ ಪುನರಾರಂಭಗೊಳ್ಳುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ.
ಸಾರ್ವಜನಿಕ ಸಾರಿಗೆ ಆರಂಭವಾಗುತ್ತಿರುವಂತೆ ಜನರು ಮೊದಲಿನಂತೆ ಅವುಗಳನ್ನು ಬಳಸಲು ಮುಂದಾಗುತ್ತಾರಾ? ಅಥವಾ ತಮ್ಮ ಸ್ವಂತ ವಾಹನಗಳ ಬಳಕೆಯನ್ನು ಹೆಚ್ಚು ಮಾಡುತ್ತಾರಾ ಎಂಬ ಪ್ರಶ್ನೆಗಳು ಮೂಡಲಾರಂಭಿಸಿವೆ. ಆದರೆ ಈ ಎಲ್ಲ ಪ್ರಶ್ನೆಗಳಿಗೆ ವೆಲಾಸಿಟಿ ಎಂಆರ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಉತ್ತರ ಸಿಕ್ಕಿದೆ.
ಲಾಕ್ಡೌನ್ ನಂತರದಲ್ಲಿ ಸಾರ್ವಜನಿಕ ಸಾರಿಗೆ ಆರಂಭವಾದರೂ ಹೆಚ್ಚಿನ ಸಂಖ್ಯೆಯ ಜನರು ಅದನ್ನು ಬಳಸುವುದು ಅನುಮಾನವಾಗಿದೆ. ಸಮೀಕ್ಷೆಯಲ್ಲಿ ಶೇ.70 ಜನ ಸಾರ್ವಜನಿಕ ಸಾರಿಗೆ ಬಳಸುವುದಿಲ್ಲ ಎಂದು ಹೇಳಿರುವುದು ಇದಕ್ಕೆ ಕಾರಣ.
ಅಷ್ಟೇ ಅಲ್ಲ, ಒಲಾ, ಉಬರ್ನಂತ ಟ್ಯಾಕ್ಸಿ ಸೇವೆಯನ್ನು ಕೂಡ ತಾವು ಬಳಸುವುದಿಲ್ಲ ಎಂದು ಶೇ.62 ಜನ ಹೇಳಿದ್ದಾರಂತೆ. ಇದರರ್ಥ ಜನರು ತಮ್ಮ ದೈನಂದಿನ ಸಂಚಾರಕ್ಕೆ ಸ್ವಂತ ವಾಹನಗಳನ್ನು ಬಳಸುವುದು ನಿಶ್ಚಿವಾಗಿದೆ. ಇದರಿಂದಾಗಿ, ರಸ್ತೆಗಳಲ್ಲಿ ವಾಹನದಟ್ಟಣೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತವಾಗಿದೆ.
ಇನ್ನು ಮಾಲ್, ಸೂಪರ್ಮಾರ್ಕೆಟ್ ಮತ್ತು ಚಿತ್ರಮಂದಿರಗಳು ಪುನರಾರಂಭಗೊಂಡರೆ ಎಂದಿನಂತೆ ಶಾಪಿಂಗ್ ಮತ್ತು ಸಿನಿಮಾ ನೋಡಲು ಹೋಗುತ್ತಾರೆ ಎಂದು ಭಾವಿಸಿದ್ದರೆ ಅದೂ ಕೂಡ ತಪ್ಪು. ಮಾಲ್ ಮತ್ತು ಸೂಪರ್ಮಾರ್ಕೆಟ್ನಲ್ಲಿ ಬಿಲ್ಕುಲ್ ಶಾಪಿಂಗ್ ಮಾಡುವುದಿಲ್ಲ ಎಂದು ಶೇ.71 ಜನ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಅದರ ಬದಲು ಆನ್ಲೈನ್ನಲ್ಲಿ ಶಾಪಿಂಗ್ ಮಾಡಲು ಬಯಸುವುದಾಗಿ ಶೇ.80 ಜನ ತಿಳಿಸಿದ್ದಾರೆ.
ಕರೊನೋತ್ತರದಲ್ಲಿ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ ಎಂದು ಶೇ.50 ಜನ ಶಂಕೆ ವ್ಯಕ್ತಪಡಿಸಿದ್ದರೆ, ಖಾಸಗಿ ವಲಯದಲ್ಲಿ ಉದ್ಯೋಗ ಭದ್ರತೆಯ ನಷ್ಟವಾಗುತ್ತದೆ ಎಂದು ಶೇ.53 ಜನ ಅಭಿಪ್ರಾಯಪಟ್ಟಿದ್ದಾರೆ.
ಚಿನ್ನ ಖರೀದಿಗೆ ಆಸಕ್ತಿ: ಕರೊನೋತ್ತರ ಜಗತ್ತಿನಲ್ಲಿ ಅನಿಶ್ಚಿತತೆ ಮುಂದುವರಿದಿದ್ದರೂ ಜನರು ಮಾತ್ರ ಚಿನ್ನದಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ಹೊಂದಿದ್ದಾರೆ.
ವೆಲಾಸಿಟಿ ಎಂಆರ್ ಸಂಸ್ಥೆಯ ಎಂಡಿ ಮತ್ತು ಸಿಇಒ ಜಸಲ್ ಷಾ, ಶೇ.30 ಜನ ಚಿನ್ನದಲ್ಲಿ ಹೂಡಿಕೆ ಮಾಡುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮ್ಯೂಚುಯಲ್ ಫಂಡ್ಗಳಲ್ಲಿ ಶೇ.47 ಜನರು ಮತ್ತು ಷೇರುಗಳಲ್ಲಿ ಶೇ.33 ಜನರು ಹಣ ಹೂಡಿಕೆ ಮಾಡಲು ಬಯಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.